ನವದೆಹಲಿ : ಸದ್ಯ ದೇಶದಲ್ಲಿ ಲಾಕ್ ಡೌನ್ 3.0 ಜಾರಿಯಲ್ಲಿದ್ದೂ, ಒಂದಷ್ಟು ಸಡಿಲಿಕೆಯನ್ನ ನೀಡಲಾಗಿದೆ. ಅದರಂತೆ ಈಗಾಗಲೇ ಕೆಲವು ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಇದರಲ್ಲಿ ಕೈಗಾರಿಕೆಗಳೂ ಒಳಗೊಂಡಿವೆ. ಇಂದು ಗೃಹ ಸಚಿವಾಲಯ ಹೊಸದಾಗಿ ಮತ್ತೊಂದು ಗೈಡ್ ಲೈನ್ಸ್ ನ ಬಿಡುಗಡೆ ಮಾಡಿದ್ದು, ಲಾಕ್ ಡೌನ್ ನ ನಂತರ ಉತ್ಪಾದನಾ ಘಟಕಗಳನ್ನ ಹೇಗೆ ತೆರೆಯಬೇಕು, ಹೇಗೆ ಕಾರ್ಯ ನಿರ್ವಹಿಸಬೇಕು ಅನ್ನೋ ಬಗ್ಗೆ ಸೂಚನೆಗಳನ್ನ ನೀಡಿದೆ.
ಹೊಸ ಗೈಡ್ ಲೈನ್ಸ್ ನಲ್ಲಿ ಏನಿದೆ..?
ಕಾರ್ಖಾನೆಯನ್ನು ಪುನರಾರಂಭಿಸುವ ಮೊದಲ ವಾರವನ್ನ ಟ್ರೈಯಲ್ ಅಥವಾ ಟೆಸ್ಟ್ ರನ್ ಎಂದು ಪರಿಗಣಿಸಬೇಕು. ಎಲ್ಲ ಸುರಕ್ಷತಾ ಕ್ರಮಗಳನ್ನ ಅನುಸರಿಸಬೇಕು. ಹೆಚ್ಚಿನ ಉತ್ಪಾದನಾ ಗುರಿಯನ್ನ ನಿಗದಿಪಡಿಸಬಾರದು.
ವಿಚಿತ್ರ ಶಬ್ದ, ವಾಸನೆ, ತೆರೆದ ವೈರ್ ಗಳು, ವೈಬರೇಷನ್ಸ್, ಸೋರಿಕೆ ಅಥವಾ ಯಾವುದೇ ರೀತಿಯ ಹಾನಿಕಾರಕ ಸಂದರ್ಭಗಳನ್ನ ಗುರುತಿಸಲು ನಿಗದಿತ ಯಂತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತಿಳುವಳಿಕೆ ನೀಡಬೇಕು.
ಪ್ರತಿನಿತ್ಯ ಲಾಕ್ ಡೌನ್ ನ ಎಲ್ಲಾ ನಿಯಮಗಳೂ ಪಾಲನೆಯಾಗುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು.
ಘಟಕ ಪುನರಾರಂಭಕ್ಕೂ ಮುನ್ನ ಸುರಕ್ಷತಾ ನಿಯಮಗಳ ಅನುಸಾರ ಎಲ್ಲ ಯಂತ್ರಗಳೂ ಸರಿಯಾದ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು.
ಕಾರ್ಖಾನೆಗಳಲ್ಲಿ ಏನೇ ಸಮಸ್ಯೆ ಕಂಡುಬಂದಲ್ಲಿ ಸ್ಥಳೀಯ ಜಿಲ್ಲಾಡಳಿತವನ್ನ ಸಂಪರ್ಕಿಸಿ ಅವರಿಂದ ಸಹಕಾರವನ್ನ ಪಡೆಯಬೇಕು.
ಈ ನಿಯಮಗಳನ್ನ ಎಲ್ಲ ಕಾರ್ಖಾನೆಗಳೂ ಕಡ್ಡಾಯವಾಗಿ ಪಾಲಿಸಲೇಬೇಕು. ಇದರ ಜೊತೆಗೆ ಸಂಗ್ರಹಣಾ ಘಟಕಗಳಲ್ಲಿ ಯಾವ ನಿಯಮಗಳನ್ನ ಅನುಸರಿಸಬೇಕು, ಉತ್ಪಾದನಾ ಘಟಕಗಳಲ್ಲಿ ಪ್ರತ್ಯೇಕವಾಗಿ ಯಾವ ನಿಯಮಗಳನ್ನ ಅನುಸರಿಸಬೇಕು, ನೌಕರರು ಏನೆಲ್ಲಾ ನಿಯಮಗಳನ್ನ ಪಾಲಿಸಬೇಕು ಅನ್ನೋ ಬಗ್ಗೆಯೂ ಪ್ರತ್ಯೇಕವಾಗಿ ಗೈಡ್ ಲೈನ್ಸ್ ನೀಡಲಾಗಿದೆ.








