ನವದೆಹಲಿ : ಏಪ್ರಿಲ್ ತಿಂಗಳಿನಲ್ಲಿ ರಾಜ್ಯಸಭೆಯ 51 ಸದಸ್ಯರು ನಿವೃತ್ತರಾಗಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಈಗಾಗಲೇ ರಣತಂತ್ರಗಳನ್ನು ರೂಪಿಸತೊಡಗಿವೆ. 245 ಸದಸ್ಯಬಲದ ಸದನದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಕೂಡ ಲಾಭದ ನಿರೀಕ್ಷೆಯಲ್ಲಿವೆ. ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷ ಬಿಜೆಪಿಗೆ ಬಹುಮತ ಇಲ್ಲ. ಹೀಗಾಗಿ ಬಿಜು ಜನತಾದಳ ಹಾಗೂ ವೈಎಸ್‌ಆರ್‌ಸಿಪಿ ಬೆಂಬಲ ಪಡೆದುಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ರಾಜ್ಯಸಭೆಯಲ್ಲಿ 82 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತೆರವಾಗುವ 51 ಸ್ಥಾನಗಳ ಪೈಕಿ 13 ಸ್ಥಾನ ಗಳಿಸುವ ಸಾಧ್ಯತೆಯಿದೆ. ಒಡಿಶಾದಲ್ಲಿ 3 ಸ್ಥಾನಗಳು ತೆರವಾಗಲಿದ್ದು, ಈ ಪೈಕಿ ಎರಡು ಬಿಜೆಡಿ ಪಾಲಾಗಲಿದ್ದು, ಉಳಿದ ಒಂದು ಬಿಜೆಪಿಗೆ ಸಿಗಲಿದೆ. ಆಂಧ್ರದಿಂದ ನಾಲ್ಕು ಸ್ಥಾನಗಳು ತೆರವಾಗಲಿದ್ದು, ವೈಎಸ್‌ಆರ್ ಕಾಂಗ್ರೆಸ್ ಪಡೆದುಕೊಳ್ಳಲಿದೆ. ಹಿಮಾಚಲ ಪ್ರದೇಶ ಹಾಗೂ ಹರ್ಯಾಣದಲ್ಲಿ ತಲಾ ಒಂದು ಸ್ಥಾನಗಳು ಬಿಜೆಪಿಗೆ ಲಾಭವಾಗಲಿವೆ ಎಂದು ಹೇಳಲಾಗುತ್ತಿದೆ.
ಇನ್ನು 46 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷದ 11 ಸದಸ್ಯರು ಏಪ್ರಿಲ್ ನಲ್ಲಿ ನಿವೃತ್ತರಾಗುತ್ತಿದ್ದಾರೆ.
ಉಳಿದಂತೆ ಮಹಾರಾಷ್ಟ್ರದಿಂದ 7, ತಮಿಳುನಾಡಿನಿಂದ 6, ಬಿಹಾರ ಹಾಗೂ ಪಶ್ಚಿಮ ಬಂಗಾಳದಿಂದ ತಲಾ 5, ಆಂಧ್ರ ಹಾಗೂ ಗುಜರಾತ್‌ನಿಂದ ತಲಾ 4, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಒಡಿಶಾದಿಂದ ತಲಾ 3, ಜಾರ್ಖಂಡ್ ಹಾಗೂ ಛತ್ತೀಸ್‌ಗಢದಿಂದ ತಲಾ 2, ಅಸ್ಸಾಂ, ಮಣಿಪುರ, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳ ತಲಾ 1ಸ್ಥಾನಗಳು ತೆರವಾಗಲಿವೆ.