ಬ್ಯಾಡ್ ಫಾರ್ಮ್ ನಲ್ಲಿರುವ ರಹಾನೆಗೆ ಆಫ್ರಿಕಾ ಟಿಕೆಟ್ ಸಿಕ್ಕಿದ್ದೇಕೆ..?
ಅಜಿಂಕ್ಯಾ ರಹಾನೆ ಕಥೆ ಮುಗೀತು. ಛೇ.. ರಹಾನೆ ಅವರನ್ನ ಯಾಕೆ ತಂಡದಲ್ಲಿ ಆಯ್ಕೆ ಮಾಡ್ತಿದ್ದಾರೆ. ಅವರನ್ನ ತಂಡದಿಂದ ಕೈಬಿಟ್ಟರೇ ಚೆನ್ನಾಗಿರುತ್ತೆ. ಅವರ ಬದಲಿಗೆ ಯುವಕರಿಗೆ ಚಾನ್ಸ್ ನೀಡಬೇಕು. ಕಿವೀಸ್ ವಿರುದ್ಧದ ಸರಣಿಯಲ್ಲಿ ರನ್ ಗಾಗಿ ಪರದಾಡಿದ್ದ ರಹಾನೆಗೆ ಆಫ್ರಿಕಾ ಟಿಕೆಟ್ ಸಿಗಲ್ಲ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆದಿತ್ತು. ಆದ್ರೆ ಅಜಿಂಕ್ಯಾ ಮತ್ತೆ ಟೀಂ ಇಂಡಿಯಾಗೆ ಆಯ್ಕೆ ಆಗಿದ್ದು, ದಕ್ಷಿಣ ಆಫ್ರಿಕಾ ನೆಲದಲ್ಲಿ ಬ್ಯಾಟ್ ಬೀಸಲಿದ್ದಾರೆ. ಹಾಗಾದ್ರೆ ಬ್ಯಾಡ್ ಫಾರ್ಮ್ ನಲ್ಲಿರುವ ರಹಾನೆಗೆ ಸೌತ್ ಆಫ್ರಿಕಾ ಟಿಕೆಟ್ ಸಿಕ್ಕಿದ್ದೇಗೆ..? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.
ಉಪನಾಯಕನ ಸ್ಥಾನದಿಂದ ಕೆಳಗಿಳಿರುವ ರಹಾನೆಗೆ ಆಯ್ಕೆ ಸಮಿತಿ ಮತ್ತೊಂದು ಚಾನ್ಸ್ ಕೊಟ್ಟಿದ್ಯಾಕೆ ಎಂಬ ಭಾರತ ತಂಡದ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ವಿವರಿಸಿದ್ದಾರೆ.
ರಹಾನೆ ವಿದೇಶಿ ಪಿಚ್‌ಗಳಲ್ಲಿ ಅದ್ಬುತವಾಗಿ ಬ್ಯಾಟ್ ಬೀಸುತ್ತಾರೆ. ವಿದೇಶಿ ಪಿಚ್ ಗಳಲ್ಲಿ ಅವರ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ. ಹೀಗಾಗಿ ಆಯ್ಕೆ ಸಮಿತಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ತಂಡವು ಜೂನಿಯರ್‌ಗಳು ಮತ್ತು ಸೀನಿಯರ್ ಆಟಗಾರರಿಂದ ಸಮತೋಲನದಲ್ಲಿರಬೇಕು. ರಹಾನೆ 2013ರಿಂದ ಟೀಂ ಇಂಡಿಯಾದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಮಿಂಚಿದ್ದರು . ರಹಾನೆ ಸಾಮಾನ್ಯವಾಗಿ ವಿದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಾರೆ. ಆದರೆ ಸ್ವದೇಶದಲ್ಲಿ ದೊಡ್ಡ ದಾಖಲೆಗಳಿಲ್ಲ. ಆಯ್ಕೆದಾರರು ವಿದೇಶದಲ್ಲಿ ಅವರ ದಾಖಲೆಯ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಿರಬಹುದು, ”ಎಂಎಸ್ ಕೆ ಪ್ರಸಾದ್ ತಿಳಿಸಿದ್ದಾರೆ. ಅಂದಹಾಗೆ ಅಜಿಂಕ್ಯಾ ರಹಾನೆ ವಿದೇಶದಲ್ಲಿ 40ರ ಸರಾಸರಿಯಲ್ಲಿ 3000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಇನ್ನು ಭಾರತದ ದಕ್ಷಿಣಾ ಆಫ್ರಿಕಾ ಟೂರ್ ವಿಚಾರಕ್ಕೆ ಬಂದರೇ ಸೆಂಚೂರಿಯನ್ ನಲ್ಲಿ ಡಿಸೆಂಬರ್-26ರಂದು ಇಂಡೋ-ಆಫ್ರಿಕಾ ಮೊದಲ ಟೆಸ್ಟ್ ನಡೆಯಲಿದೆ.
ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ರೆ, ರೋಹಿತ್ ಶರ್ಮಾ ಉಪನಾಯಕರಾಗಿ ಜವಾಬ್ದಾರಿ ಹೊತ್ತಿದ್ದು, ಕೆಎಲ್ ರಾಹುಲ್ ಜೊತೆ ಇನ್ನಿಂಗ್ ಆರಂಭಿಸಬಹುದು. ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ ಬ್ಯಾಟ್ ಬಲವಾಗಿದ್ದಾರೆ. ರಿಷಬ್ ಪಂತ್, ವೃದ್ಧಿಮಾನ್ ಸಹಾ ವಿಕೆಟ್ ಕೀಪರ್ ಗಳಾಗಿದ್ದಾರೆ. ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಶರ್ದೂಲ್ ಠಾಕೂರ್ ಆಲ್ ರೌಂಡರ್ ಗಳಾಗಿದ್ದು, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ವೇಗಿಗಳ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.









