ಆಶಸ್ ಸರಣಿ | ಆಸ್ಟ್ರೇಲಿಯಾಗೆ ಭರ್ಜರಿ ಜಯ
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿಯಲ್ಲಿ ಆಸೀಸ್ ತಂಡ ಶುಭಾರಂಭ ಮಾಡಿದೆ. ಸರಣಿಯ ಮೊದಲ ಮ್ಯಾಚ್ ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ಗಳ ಜಯ ಸಾಧಿಸಿದೆ. ಆ ಮೂಲಕ ಐದು ಮ್ಯಾಚ್ ಗಳ ಸರಣಿಯಲ್ಲಿ 1.0 ಅಂತರದೊಂದಿಗೆ ಮುನ್ನಡೆ ಸಾಧಿಸಿಕೊಂಡಿದೆ. ಇಂಗ್ಲೆಂಡ್ ನೀಡಿದ 20 ರನ್ ಗುರಿಯನ್ನು ಆತಿಥೇಯರು 5.1 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಬೆನ್ನಟ್ಟಿದ್ದಾರೆ.
ಇದಕ್ಕು ಮುನ್ನ ಮೂರನೇ ದಿನದಾಟದ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 220 ರನ್ ಗಳೊಂದಿಗೆ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ ನಾಲ್ಕನೇ ದಿನದ ಆಟದ ಮೊದಲ ಸೆಷನ್ ನಲ್ಲಿಯೇ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾಪಲ್ಟಾ ಆಯಿತು.
ಇನಿಂಗ್ಸ್ ನ 73ನೇ ಓವರ್ ನಲ್ಲಿ ತಂಡದ ಮೊತ್ತ 223 ರನ್ ಗಳಿದ್ದಾಗ ಡೇವಿಡ್ ಮಲಾನ್ ಔಟ್ ಆದ್ರು. ಅಲ್ಲಿಂದ ಇಂಗ್ಲೆಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಕೇವಲ 74 ರನ್ ಗಳ ಅವಧಿಯಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಜೋ ರೂಟ್ 89 ರನ್ ಗಳಿಸಿದರೆ, ಇತರರು ಹೆಚ್ಚು ಪ್ರಭಾವ ಬೀರಲಿಲ್ಲ. ಆಸೀಸ್ ಪರ ಬೌಲಿಂಗ್‌ನಲ್ಲಿ ನಾಥನ್ ಲಿಯಾನ್ 4, ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮಿನ್ಸ್ ಮತ್ತು ಚೆರೋ ತಲಾ ಎರಡು ವಿಕೆಟ್ ಪಡೆದರು.ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್ ತಲಾ ಒಂದು ವಿಕೆಟ್ ಪಡೆದರು.
ಇದರೊಂದಿಗೆ 20 ರನ್ ಗಳ ಗುರಿ ಪಡೆದು ಆಸ್ಟ್ರೇಲಿಯಾ ನಿರಾಯಾಸವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಇನ್ನು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್‌ಗಳಿಗೆ ಆಲೌಟ್ ಆಗಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ 425 ರನ್‌ಗಳಿಗೆ ಆಲೌಟ್ ಆಗಿತ್ತು.









