ದೇಶದ ಪ್ರಗತಿಗೆ ನದಿಗಳ ನೀರಿನ ಸದ್ಬಳಕೆ ಅಗತ್ಯ : ಮೋದಿ
ನವದೆಹಲಿ : ದೇಶದ ಪ್ರಗತಿಯಲ್ಲಿ ನೀರು ಉಳಿತಾಯವು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ನದಿಗಳ ನೀರಿನ ಸದ್ಬಳಕೆ ಆಗಬೇಕು, ರೈತರಿಗೆ ಕೃಷಿ ಮಾಡಲು ಸೂಕ್ತ ರೀತಿಯಲ್ಲಿ ನೀರು ಲಭಿಸುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿಗಳು ಇಂದು ಉತ್ತರ ಪ್ರದೇಶದ ಬಲ್ರಾಂಪುರ್ದ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಮರ್ಪಕ ನೀತಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡಾಗ ಮಾತ್ರ ಯಾವುದೇ ಯೋಜನೆ ಪೂರ್ಣಗೊಂಡು ಅದರ ಸವಲತ್ತುಗಳು ಜನರಿಗೆ ದೊರಕಲು ಸಾಧ್ಯ. ಐದು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸರಯೂ ಕಾಲುವೆ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕೇವಲ ಐದು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಯೋಜನೆಯ ಸೌಲಭ್ಯಗಳನ್ನು ಜನರಿಗೆ ನೀಡುವಂತೆ ಮಾಡಿದೆ. ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಎರಡೂ ಸೇರಿ ಡಬಲ್ ಎಂಜಿನ್ ಸರ್ಕಾರಗಳು ಈ ಯೋಜನೆಯನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಹೇಳಿದರು.
ದೇಶದ ಪ್ರಗತಿಯಲ್ಲಿ ನೀರು ಉಳಿತಾಯವು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ನದಿಗಳ ನೀರಿನ ಸದ್ಬಳಕೆ ಆಗಬೇಕು, ರೈತರಿಗೆ ಕೃಷಿ ಮಾಡಲು ಸೂಕ್ತ ರೀತಿಯಲ್ಲಿ ನೀರು ಲಭಿಸುವಂತಾಗಬೇಕು. ಈ ಕಾರಣದಿಂದಲೇ ನಮ್ಮ ಸರ್ಕಾರ ನೀರು ರಕ್ಷಣೆ ಮತ್ತು ಅದರ ಸದ್ಬಳಕೆಗೆ ಆದ್ಯತೆಯನ್ನು ನೀಡಿದೆ ಎಂದರು.









