ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ ಜ್ವರ, ಔಷಧಿಗಳಿಂದ ಬಳಲಿ ಬೆಂಡಾಗಿದ್ದಳು.
ಆಗ ಆಕೆಯನ್ನು ಕಾಡಿದ್ದು ಜ್ವರದ ನೋವಲ್ಲ. ತನ್ನ ಕಾಮನ್‍ವೆಲ್ತ್ ಗೇಮ್ಸ್ ಕನಸು ಕಮರಿ ಹೋಗುತ್ತಿದೆಯಲ್ಲ ಅನ್ನೋ ವೇದನೆ..!
ಬೆಂಬಿಡದೆ ಕಾಡಿದ ಜ್ವರ ಆಕೆಯ ದೇಹವನ್ನು ಸೊರಗುವಂತೆ ಮಾಡಿತ್ತು. ಹೀಗಾಗಿ ವಿದೇಶದಲ್ಲಿದ್ದ ವಿಶೇಷ ತರಬೇತಿಯನ್ನು ತಪ್ಪಿಸಿಕೊಂಡಿದ್ದಳು. ಹಾಗಂತ ಆಕೆ ಕುಗ್ಗಲಿಲ್ಲ. ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಚೇತರಿಸಿಕೊಂಡ ತಕ್ಷಣವೇ ಮತ್ತೆ ಅಖಾಡಕ್ಕಿಳಿದಳು.
ಆಗ ಕೋಚ್‍ಗಳು ಆಕೆಗೆ ಹೇಳಿದ್ದು ಇಷ್ಟೇ.. ಫಲಿತಾಂಶದ ಬಗ್ಗೆ ಯೋಚನೆ ಮಾಡಬೇಡ. ನಿನ್ನ ಮೇಲೆ ನಂಬಿಕೆ ಇಟ್ಟು ಸ್ಪರ್ಧೆ ಮಾಡು. ಈ ಧೈರ್ಯದ ಮಾತೇ ಸೊರಗಿದ್ದ ದೇಹಕ್ಕೆ “ಟಾನಿಕ್” ನೀಡಿದಂತೆ ಆಯ್ತು.
ಹೌದು. ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಬಾಕ್ಸಿಂಗ್ ರಿಂಗ್‍ನಲ್ಲಿ ಆಕೆ ಬರೀ ಸ್ಪರ್ಧಿಯಾಗಿರಲಿಲ್ಲ. ಗಾಯಗೊಂಡ ಸಿಂಹಿಣಿಯಂತೆ ಎದುರಾಳಿಗಳ ವಿರುದ್ಧ ಪ್ರಹಾರ ನಡೆಸಿದ್ದಳು. ಪ್ರತಿಯೊಂದು ಪಂಚ್‍ನಲ್ಲೂ ಅನುಭವಿಸಿದ್ದ ನೋವಿನ ಯಾತನೆ ಇತ್ತು. ಪ್ರತಿಯೊಂದು ಹೆಜ್ಜೆಯಲ್ಲೂ ಸಿಂಹಿನಿಯ ಘರ್ಜನೆ ಇತ್ತು. ಪ್ರತಿಯೊಂದು ದಾಳಿಯಲ್ಲೂ ಚಿನ್ನದ ಪದಕ ಗೆಲ್ಲುವ ಹಸಿವಿತ್ತು.
ಇನ್ನೇನು ಫೈನಲ್‍ನ ಕೊನೆಯ ಗಂಟೆ ಮೊಳಗಿತ್ತು. ರೆಫ್ರಿ ಆಕೆಯ ಕೈಯನ್ನು ವಿಜಯದ ಸಂಕೇತವಾಗಿ ಮೇಲೆಕ್ಕಿತ್ತಿದರು. ಆಗ ಆಕೆಯ ಆನಂದಕ್ಕೆ ಪಾರವೇ ಇರಲಿಲ್ಲ. ಓಡೋಡಿ ಬಂದು ಭಾರತದ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ನಲಿದಾಡಿದಳು.
ಪ್ರತಿಷ್ಠಿತ ಪೋಡಿಯಂನಲ್ಲಿ ಚಿನ್ನದ ಪದಕವನ್ನು ಕೊರಳಿಗೆ ಹಾಕೊಂಡು ಭಾರತದ ರಾಷ್ಟ್ರ ಗೀತೆಯನ್ನು ಮೊಳಗಿಸಿದಳು. ಐದಾರು ವಾರಗಳ ಹಿಂದೆ ಕಣ್ಣೀರು ಹಾಕೊಂಡಿದ್ದ ಹುಡುಗಿ, ಇಂದು ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಮಂದಹಾಸ ನಗೆ ಬೀರಿದಳು.
ಈ ಧೀರೆಯ ಹೆಸರು ಜೈಸ್ಮಿನ್ ಲಂಬೋರಿಯಾ.
ಹರಿಯಾಣದ ಭಿವಾನಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದ ಮಗಳು. ಭಿವಾನಿಗೆ ಭಾರತದ ಬಾಕ್ಸಿಂಗ್‍ನ “ತೊಟ್ಟಿಲು” ಎಂದು ಕರೆಯಲಾಗುತ್ತದೆ. ಅಂತಹ ತೊಟ್ಟಿಲಿನಲ್ಲಿ ಬೆಳೆದ ಜೈಸ್ಮಿನ್‍ಗೆ, ಬಾಕ್ಸಿಂಗ್ ಒಂದು ಸ್ಪರ್ಧೆಯಾಗಿರಲಿಲ್ಲ. ತನ್ನ ಕುಟುಂಬದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ವಾರಸುಧಾರೆಯಾಗಿದ್ದಳು.
ಹಾಗಂತ ಜೈಸ್ಮಿನ್ ತಂದೆ ಜೈವೀರ್ ಲಂಬೋರಿಯಾ ಬಾಕ್ಸರ್ ಆಗಿರಲಿಲ್ಲ. ಹೋಮ್ ಗಾರ್ಡ್ ಕೆಲಸ ಮಾಡುತ್ತಿದ್ದರು. ತಾಯಿ ಜೋಂಗಿಂದರ್ ಕೌರ್. ಗೃಹಿಣಿಯಾಗಿದ್ದರೂ ಮಗಳ ಬಾಕ್ಸಿಂಗ್ ಆಸಕ್ತಿಯನ್ನು ಗಮನಿಸಿ ಬೆಂಬಲ ನೀಡಿದ್ದರು.
ಆದ್ರೆ ಜೈಸ್ಮಿನ್‍ನ ಚಿಕ್ಕಪ್ಪಂದಿರಾದ ಸಂದೀಪ್ ಲಂಬೋರಿಯಾ ಮತ್ತು ಪರ್ವಿಂದರ್ ಲಂಬೋರಿಯಾ ಅಪ್ರತಿಮ ಬಾಕ್ಸರ್‍ಗಳಾಗಿದ್ದರು. 2006ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಪರ್ವಿಂದರ್ ಸ್ಪರ್ಧೆ ಮಾಡಿದ್ದರು. ನಂತರ ಇಬ್ಬರು ಸೇರಿಕೊಂಡು ಲಂಬೋರಿಯಾ ಬಾಕ್ಸಿಂಗ್ ಅಕಾಡೆಮಿಯನ್ನು ಶುರು ಮಾಡಿದ್ದರು. ಕುಟುಂಬದ ಪರಂಪರೆಯ ಸಂಕೇತವಾಗಿರುವ ಇದೇ ಅಕಾಡೆಮಿಯಲ್ಲಿ ಜೈಸ್ಮಿನ್ ತರಬೇತಿ ಪಡೆಯುತ್ತಿದ್ದಳು.
ಅಂದ ಹಾಗೆ, ಭಿವಾನಿಯಲ್ಲಿ ಬಾಕ್ಸಿಂಗ್ ಬೀಜ ಬಿತ್ತಿದ್ದ ದಿಗ್ಗಜ ಬಾಕ್ಸರ್ ಹವಾಸಿಂಗ್ ಅವರ ದೂರದ ಸಂಬಂಧಿಯೂ ಹೌದು. ಇಂತಹ ವಾತಾವರಣದಲ್ಲಿ ಬೆಳೆದ ಜೈಸ್ಮಿನ್ ಬಾಕ್ಸಿಂಗ್ ಸ್ಪರ್ಧೆಯ ತಂತ್ರಗಳನ್ನು ಕರಗತ ಮಾಡಿಕೊಂಡು ಹಂತ ಹಂತವಾಗಿ ಬೆಳೆದಳು. 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಜೈಸ್ಮಿನ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಿದ್ದಳು.
2021ರಲ್ಲಿ ದುಬೈನಲ್ಲಿ ಏಷ್ಯನ್ ಅಮೆಚೂರು ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದು ಪದಕದ ಬೇಟೆಯಾಡಲು ಶುರು ಮಾಡಿದ್ದಳು. 2022ರ ಬರ್ಮಿಂಗ್ ಹ್ಯಾಮ್ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಕಂಚು ಗೆದ್ದುಕೊಂಡಿದ್ದಳು. ನಂತರ 2025ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಹಾಗೂ ವಿಶ್ವ ಬಾಕ್ಸಿಂಗ್ ನಲ್ಲಿ ಎರಡು ಬಂಗಾರವನ್ನು ತನ್ನದಾಗಿಸಿಕೊಂಡಿದ್ದಳು. ಇದೀಗ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕವನ್ನು ಮೂಡಿಗೇರಿಸಿಕೊಂಡಿದ್ದಾಳೆ.
ಇನ್ನು ಬರ್ಮಿಂಗ್ ಹ್ಯಾಮ್‍ನಲ್ಲಿ ಕಂಚಿನ ಪದಕ ಆಕೆಯ ಬದುಕಿಗೆ ಹೊಸ ತಿರುವನ್ನು ನೀಡಿತ್ತು. ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಳು. ಕಾಪ್ರ್ಸ್ ಆಫ್ ಮಿಲಿಟರಿ ಪೊಲೀಸ್ ಗೆ ಸೇರ್ಪಡೆಯಾದ ಮೊದಲ ಬಾಕ್ಸರ್ ಎಂಬ ಹೆಗ್ಗಳಿಕೆಯೂ ಈಕೆಗಿದೆ. ಆಗ ಜೈಸ್ಮಿನ್ ಹೇಳಿದ್ದು ಹೀಗೆ. “ಇದು ನನಗೆ ಸಿಕ್ಕಿದ ದೊಡ್ಡ ಗೌರವ. ಆದ್ರೆ ಇದು ಮಹಿಳಾ ಕ್ರೀಡಾಪಟುಗಳಿಗೆ ಪ್ರೇರಣೆಯಾಗುವ ಅವಕಾಶ ಎಂದು ನಾನು ಭಾವಿಸುತ್ತೇನೆ” ಈ ಮೂಲಕ ಯುವ ಮಹಿಳಾ ಬಾಕ್ಸರ್‍ಗಳಿಗೆ ಪ್ರೇರಣೆ ನೀಡಿದ್ದರು.
ಸೋಲು ಕಲಿಸಿದ ಪಾಠಗಳು
ಜೀವನದಲ್ಲಿ ಪ್ರತಿಯೊಂದು ಸ್ಪರ್ಧೆಗಳನ್ನು ಗೆಲ್ಲುವುದು ಅಸಾಧ್ಯ. ಹಾಗೇ ಜೈಸ್ಮಿಕ್ ಕೂಡ. 2024ರ ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಳು. ಆದ್ರೆ ಜೈಸ್ಮಿನ್ ಸೋಲಿನ ಹಿಂದೆ ಹೋಗಲಿಲ್ಲ. ಆ ಸೋಲನ್ನೇ ಶಕ್ತಿಯನ್ನಾಗಿಸಿಕೊಂಡಳು. ದೇಹಕ್ಕಿಂತ ಮನಸ್ಸಿನ ಶಕ್ತಿ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಳು. ಬಾಕ್ಸಿಂಗ್ ರಿಂಗ್‍ನಲ್ಲಿ ಬರೀ ಕೌಶಲ್ಯಗಳು, ಶಕ್ತಿ, ವೇಗವೇ ಮುಖ್ಯವಾಗಿರುವುದಿಲ್ಲ. ಅದಕ್ಕಿಂತ ಮುಖ್ಯ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅದಕ್ಕೆ ಆಕೆ ಅನುಸರಿಸಿದ್ದು ಮಹೇಂದ್ರ ಸಿಂಗ್ ಧೋನಿಯ ಸೂತ್ರವನ್ನು.
ಧೋನಿಯ ತಾಳ್ಮೆ.. ಜೈಸ್ಮಿನ್‍ಗೆ ಮಾನಸಿಕ ಶಕ್ತಿ..!
ಪ್ರತಿಯೊಬ್ಬರಿಗೂ ಒಬ್ಬರು ಪ್ರೇರಣೆಯಾಗಿರುತ್ತಾರೆ. ಹಾಗೇ, ಜೈಸ್ಮಿನ್‍ಗೆ ಪ್ರೇರಣೆಯಾಗಿದ್ದು ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್. ಧೋನಿ. ಎಷ್ಟೇ ಒತ್ತಡಗಳಿದ್ರೂ ಕೂಲ್ ಆಗಿಯೇ ತಂಡವನ್ನು ಮುನ್ನಡೆಸುತ್ತಿರುವ ಧೋನಿಯ ಮನಸ್ಥಿತಿಗೆ ಜೈಸ್ಮಿನ್ ಮಾರು ಹೋಗಿದ್ದಳು.
ಬಾಕ್ಸಿಂಗ್ ರಿಂಗ್‍ನಲ್ಲಿ ಆಕ್ರಮಣಕಾರಿ ಪ್ರವೃತ್ತಿ ಎಲ್ಲ ಸಮಯದಲ್ಲೂ ಗೆಲುವನ್ನು ತಂದುಕೊಡಲ್ಲ. ಅದರ ಜೊತೆಗೆ ಎದುರಾಳಿಯ ನಡೆಯನ್ನು ಅರಿತುಕೊಳ್ಳಬೇಕು. ಅದಕ್ಕೆ ಸಂಯಮ ಬೇಕು. ಸಮಯ ಪರಿಸ್ಥಿತಿಯನ್ನು ನೋಡಿಕೊಂಡು ಎದುರಾಳಿಯ ಮೇಲೆ ದಾಳಿ ಮಾಡಬೇಕು. ಧೋನಿಯ ಶಾಂತಚಿತ್ತತೆಯ ನಾಯಕತ್ವದ ಗುಣಗಳನ್ನು ಜೈಸ್ಮಿನ್ ಕೂಡ ಅಳವಡಿಸಿಕೊಂಡಳು. ಹಾಗಾಗಿಯೇ ಜೈಸ್ಮಿನ್ ಆವೇಶ, ಆಕ್ರಮಣಕಾರಿಯಾಗಿ ರಿಂಗ್‍ನಲ್ಲಿ ಕಾಣಿಸಲ್ಲ. ಬದಲಾಗಿ ಶಾಂತವಾಗಿ ಬೇಟೆಯಾಡುವ ಸಿಂಹಿಣಿ.
ಜೈಸ್ಮಿನ್‍ಗೆ ಬೆಂಬಿಡದೆ ಕಾಡುತ್ತಿದ್ದ ಜ್ವರ..!
ಹಾಗೇ ನೋಡಿದ್ರೆ ಕಳೆದ ಮಾರ್ಚ್‍ನಿಂದಲೇ ಜೈಸ್ಮಿನ್ ಸಂಕಷ್ಟದ ದಿನಗಳು ಶುರುವಾಗಿದ್ದವು. ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದ್ರೂ ಫೈನಲ್ ಸ್ಪರ್ಧೆಯನ್ನು ಗೆದ್ದುಕೊಂಡಳು. ಇದೇ ವೇಳೆ ಆಕೆಯ ತಲೆಗೆ ಏಟು ಕೂಡ ಬಿದ್ದಿತ್ತು. ಪುಣ್ಯಕ್ಕೆ ಏನು ತೊಂದರೆ ಆಗಲಿಲ್ಲ.
ಈ ಆಘಾತದಿಂದ ಹೊರಬಂದ ನಂತ್ರ ಮತ್ತೊಂದು ಸವಾಲು. ಕಾಮನ್‍ವೆಲ್ತ್ ಗೇಮ್ಸ್‍ನ ತರಬೇತಿ ಶುರುವಾಗಿತ್ತು. ಸುಮಾರು 20 ದಿನಗಳ ಕಾಲ ಭಾರತದಲ್ಲೇ ತರಬೇತಿ ಪಡೆಯುತ್ತಿದ್ದಳು. ಆಗ ಮತ್ತೆ ಕಾಡಿದ್ದು ಜ್ವರ. ಮತ್ತೆ ಆಸ್ಪತ್ರೆ ಸೇರಿಕೊಂಡಿದ್ದಳು. ಇದೀಗ ಚೇತರಿಸಿಕೊಂಡು ಚಿನ್ನದ ರಾಣಿಯಾಗಿದ್ದಾಳೆ.
“ಬರ್ಮಿಂಗ್ ಹ್ಯಾಮ್‍ನಲ್ಲಿ ಕಂಚು ಗೆದ್ದಿದೆ. ಈ ಬಾರಿ ಪದಕದ ಬಣ್ಣದ ಹಳದಿಯಾಗಿದೆ. ಚಿನ್ನ ಗೆಲ್ಲಬೇಕು ಎಂಬ ಗುರಿಯೊಂದಿಗೆ ಬಂದಿದ್ದೆ. ನನ್ನ ಗುರಿಯೂ ಈಡೇರಿದೆ. ಕನಸು ನನಸಾಗಿದೆ ಎಂದು ಹೆಮ್ಮೆಯಿಂದಲೇ ಹೇಳ್ತಾಳೆ ಜೈಸ್ಮಿನ್.
ಸೋಲು ಕ್ಷಣಿಕ. ನೋವು ಆ ಕ್ಷಣದ ಗಾಯ. ಆದ್ರೆ ಹೋರಾಟ ನಿರಂತರ. ಗೆಲುವು ಶಾಶ್ವತ. ಜೈಸ್ಮಿನ್ ಕೂಡ ಇದೇ ಹಾದಿಯಲ್ಲಿ ಸಾಗಿ ಬಂದಿರೋದು. ಅದಕ್ಕಾಗಿಯೇ
ಜೈಸ್ಮಿನ್ ಲಂಬೋರಿಯಾ
ಬರೀ ಮಹಿಳಾ ಬಾಕ್ಸರ್‍ನ ಹೆಸರಲ್ಲ.
ಪ್ರತಿ ಯುವತಿಯರಿಗೂ ಪ್ರೇರಣೆಯ ಹೆಸರು.
ಭಿವಾನಿ ಮಣ್ಣಿನ ಪರಂಪರೆಗೆ ಇನ್ನೊಂದು ಹೆಸರು.
ಭಾರತೀಯ ಬಾಕ್ಸಿಂಗ್ ಉತ್ತುಂಗಕ್ಕೇರಿಸಿದ್ದ ಮತ್ತೊಂದು ಹೆಸರು..!
ಸನತ್ ರೈ








