ವಿಜಯೇಂದ್ರ ಬಾಹುಬಲಿ ಸ್ಟಿಲ್ ಇನ್ ಫೀಲ್ಡ್? ಎಲ್ಲಿಯವರೆಗೆ ಶಾಂತ ಸಂತನಂತೆ ಅವುಡಗಚ್ಚಿ ಸಹಿಸಿಕೊಳ್ತೀರಿ ಜ್ಞಾನೇಂದ್ರ ಸಾಹೇಬ್ರೇ?
ಕೃಪೆ – ಹಿಂದವಿ ಸ್ವರಾಜ್
ಅಚಾನಕ್ಕಾಗಿ ರಾಜ್ಯವೇ ಆಶ್ಚರ್ಯಪಡುವಂತೆ ಗೃಹಸಚಿವರಾಗಿ ಆಯ್ಕೆಯಾದ ತೀರ್ಥಹಳ್ಳಿಯ ಸೋ ಕಾಲ್ಡ್ ಸಜ್ಜನ ಜನಪ್ರತಿನಿಧಿ ಅರಗ ಜ್ಞಾನೇಂದ್ರ ಸರ್ಕಾರದಲ್ಲಿ ಯಾಕೋ ಸದ್ದೇ ಮಾಡ್ತಿಲ್ಲ. ಅರಗ ಜ್ಞಾನೇಂದ್ರ ಸಂಘಪರಿವಾರದ ಹಿನ್ನೆಲೆಯವರು ನಿರಂತರವಾಗಿ ತೀರ್ಥಹಳ್ಳಿಯಿಂದ ಆಯ್ಕೆಯಾದ ಹಿರಿಯ ಅನುಭವ ಜನಪ್ರತಿನಿಧಿಯಾಗಿದ್ದರೂ ಅವರು ಹೋಂ ಮಿನಿಸ್ಟರ್ ಆಗ್ತಾರೆ ಎಂದು ಅವರ ಕ್ಷೇತ್ರದ ಜನರು ಅಷ್ಟೇ ಯಾಕೆ ಸ್ವತಃ ಜ್ಞಾನೇಂದ್ರರೇ ಕಲ್ಪಿಸಿಕೊಂಡಿದ್ದರೋ ಇಲ್ಲವೋ. ಆದರೆ ಜ್ಞಾನೇಂದ್ರ ರಾಜ್ಯದ ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಪ್ರಭಾವಳಿ ಅಷ್ಟೇನೂ ಜಗಮಗಿಸುತ್ತಿಲ್ಲ ಅನ್ನುವುದು ತೀರ್ಥಹಳ್ಳಿಯ ಜನರ ಅಂಬೋಣ.
ಜಾನೇಂದ್ರ ಹೋಂ ಮಿನಿಸ್ಟರ್ ಆಗುತ್ತಿದ್ದ ಹಾಗೆ ಶಿವಮೊಗ್ಗ ಜಿಲ್ಲೆಯ ಹಿರಿಯ ಪರಿವಾರದ ಮುಖಂಡರು ಸಂಭ್ರಮಿಸಿದ್ದರು. ಭಾಜಪಾ ಕಾರ್ಯಕರ್ತರು ಹರ್ಷಿಸಿದ್ದರು. ಅರಗ ಜ್ಞಾನೇಂದ್ರ ಸಮರ್ಥರು ಅವರು ಹೋಂ ಪೋರ್ಟ್‌ಫೋಲಿಯೋವನ್ನು ಸಮರ್ಥವಾಗಿ ನಿಬಾಯಿಸುತ್ತಾರೆ ಅನ್ನುವ ನಂಬಿಕೆಯಂತೂ ಎಲ್ಲರಿಗೂ ಇತ್ತು. ಅದರಂತೆ ಮೊದಮೊದಲಿನ ವಿವಾದಾತ್ಮಕ ಹೇಳಿಕೆಯೊಂದನ್ನು ಹೊರತುಪಡಿಸಿದರೆ ಜ್ಞಾನೇಂದ್ರ ಅಚ್ಚುಕಟ್ಟಾಗಿಯೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಪುನಿತ್ ರಾಜ್‌ಕುಮಾರ್ ಅಕಾಲಿಕ ದೇಹಾಂತ್ಯವಾದಾಗ ಕ್ಷೇತ್ರಕ್ಕೆ ತೆರಳುತ್ತಿದ್ದವರು ಅರ್ಧದಾರಿಯಿಂದ ಬೆಂಗಳೂರಿಗೆ ವಾಪಾಸಾದರು. ಆನಂತರ ಮೂರು ದಿನ ಲಕ್ಷಾಂತರ ಅಭಿಮಾನಿಗಳು ಅಪ್ಪು ಪಾರ್ಥಿವ ಶರೀರ ನೋಡಲು ಧಾವಿಸಿ ಬರುತ್ತಿದ್ದಾಗಲೂ ಎಲ್ಲಿಯೂ ಲಾ ಎಂಡ್ ಆರ್ಡರ್ ಕೈ ತಪ್ಪದಂತೆ ನೋಡಿಕೊಂಡರು. ಈ ಕಾರ್ಯಚರಣೆಯ ಸಂದರ್ಭದಲ್ಲಿ ಕಾಲುಮುರಿದುಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿ ಮಾತಾಡಿಸಿ ಸಹೃದಯತೆ ಮೆರೆದರು. ಅವೆಲ್ಲವೂ ಓಕೆ. ಒಬ್ಬ ಗೃಹಸಚಿವರ ಅಧಿಕಾರಾವಧಿ ಬಳಸಿ ಏನಾಗಬೇಕಿತ್ತೋ ಅದಾಗುತ್ತಿಲ್ಲ ಅನ್ನುವುದು ಈಗ ಶಿವಮೊಗ್ಗ ಜಿಲ್ಲೆಯ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಸ್ವತಃ ಅರಗ ಜ್ಞಾನೇಂದ್ರರೇ ತಾನು ಶಾಸಕನಾಗಿದ್ದರೇ ಒಳ್ಳೆಯದಿತ್ತು, ಈತರಹದ ಮಿನಿಸ್ಟರ್ ಗಿರಿ ಬೇಕಾಗಿರಲಿಲ್ಲ. ಹೇಳಿಕೊಳ್ಳಲು ಹೋಂ ಮಿನಿಸ್ಟರ್ ಆದರೆ ಒಬ್ಬನೇ ಒಬ್ಬ ಪೊಲೀಸ್ ಅಧಿಕಾರಿಯನ್ನೂ ವರ್ಗಾಯಿಸುವ ಸ್ವಾತಂತ್ರ್ಯವಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತವೆ ಅವರನ್ನು ಹತ್ತಿರದಿಂದ ಬಲ್ಲ ವಿಧಾನಸೌಧದ ಮೂಲಗಳು. ಈ ನಿಟ್ಟಿನಲ್ಲಿ ಗೃಹಸಚಿವ ಪಟ್ಟ ಅರಗ ಜ್ಞಾನೇಂದ್ರರ ಪಾಲಿಗೆ ಬಂಗಾರದ ಪಂಜರದಂತಾಗಿದೆ. ಗೃಹಖಾತೆಯ ಮೇಲೆ ಇನ್ಯಾರೋ ಪ್ರಭಾವ ಬೀರುತ್ತಿದ್ದಾರೆ. ಅರಗ ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗದೇ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ಜಿಲ್ಲೆಯ ಕೆಲವು ಪತ್ರಕರ್ತರು ಮಾತಾಡಿಕೊಳ್ಳುತ್ತಿರುವುದು ತೀರಾ ತೆಗೆದುಹಾಕುವ ವಿಚಾರವೇನಲ್ಲ. ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಅರಗ ಜ್ಞಾನೇಂದ್ರ ಇಡೀ ರಾಜ್ಯದಲ್ಲಿ ತಮ್ಮ ಒಬ್ಬನೇ ಒಬ್ಬ ಅಧಿಕಾರಿಯನ್ನೂ ವರ್ಗಾಯಿಸಲು ಸಾಧ್ಯವಾಗಿಲ್ಲ ಅನ್ನುವ ಮಾಹಿತಿಯಿದೆ. ಆದರೂ ಪೊಲೀಸ್ ಇಲಾಖೆಯಲ್ಲಿ ಟ್ರಾನ್ಸ್‌ಫರ್‌ಗಳಾಗುತ್ತಲೇ ಇವೆ. ಹೋಂ ಮಿನಿಸ್ಟರ್ ಕಚೇರಿಯಲ್ಲಿ ಕುಳಿತು ಹೀಗೆ ಟ್ರಾನ್ಸ್‌ಫರ್ ಫೈಲ್‌ಗಳಿಗೆ ಬೇಸರದಿಂದ ಸಹಿ ಹಾಕುತ್ತಿರುವ ಅರಗ ನಿಜಕ್ಕೂ ಅಸಹಾಯಕರಾಗಿದ್ದಾರೆ ಎನ್ನಲಾಗುತ್ತಿದೆ. ನೆಪ ಮಾತ್ರಕ್ಕೆ ಖುರ್ಚಿಯಲ್ಲಿ ಕೂತಂತಿರುವ ಅರಗ ಜ್ಞಾನೇಂದ್ರ ಸಾಹೇಬರು ಯಾರ ಅಣತಿಯನ್ನು ಪಾಲಿಸಲೇಬೇಕಾಗಿದೆ ಅನ್ನುವ ಪ್ರಶ್ನೆ ಇಲ್ಲಿ ಉದ್ಭವಿಸುತ್ತಿರುವುದು ಸಹಜ.
ಪೊಲೀಸ್ ಅಧಕಾರಿಗಳ ವರ್ಗಾವಣೆ, ಪೋಸ್ಟಿಂಗ್ ವಿಚಾರದಲ್ಲಿ ಅರಗ ಜ್ಞಾನೇಂದ್ರ ನೇರವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸುಪರ್ದಿಯಲ್ಲಿರುವ ಇಲಾಖೆಯ ಪ್ರಮುಖ ನಿರ್ಧಾರಗಳನ್ನು ಅವರಿಂದ ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ಕೆಲವು ಬೆಂಬಲಿಗರ ಕಡತಗಳು ವಿಧಾನಸೌಧದಲ್ಲಿ ಸಲೀಸಾಗಿ ಚಲಿಸುತ್ತಿಲ್ಲ. ಇದು ಅರಗ ಅವರಿಗಿಂತ ಹೆಚ್ಚಾಗಿ ಅವರ ಬೆಂಬಲಿಗರನ್ನು ಕೆರಳಿಸಿದ್ದು ಅವರಲ್ಲೇ ಕೆಲವರು ತಮ್ಮ ಮಾಧ್ಯಮ ಮಿತ್ರರ ಬಳಿ ಹತಾಶೆ ತೋಡಿಕೊಳ್ಳುತ್ತಿದ್ದಾರಂತೆ.
ಗೃಹಸಚಿವರಾಗಿ ಅರಗ ಜ್ಞಾನೇಂದ್ರರನ್ನೇ ಯಾಕೆ ಮಾಡಲಾಯಿತು ಅನ್ನುವ ಪ್ರಶ್ನೆಗಳನ್ನು ಈಗ ಮತ್ತೆ ಅವರ ಬೆಂಬಲಿಗರು ಕೇಳಿಕೊಳ್ಳುತ್ತಿದ್ದಾರೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಮಾತನ್ನು ಕೇಳಬಹುದಾದ ಶಿಷ್ಯ ಬಸವರಾಜ್ ಬೊಮ್ಮಾಯಿ ಹೋಮ್ ಮಿನಿಸ್ಟರ್ ಆಗಿದ್ದರು. ಬಸವರಾಜ್ ಬೊಮ್ಮಾಯಿಯೇ ಸಿಎಂ ಸೀಟ್‌ನಲ್ಲಿ ಕೂರುವುದು ಯಡಿಯೂರಪ್ಪನವರ ಪ್ರತಿನಿಧಿಯಾಗಿ ಅನ್ನುವುದು ಮೊದಲೇ ನಿರ್ಧಾರವಾಗಿತ್ತಲ್ಲ. ಹೀಗಾಗಿ ಅನಿವಾರ್ಯವಾಗಿ ಅರಗ ಸಹ ಯಡಿಯೂರಪ್ಪ ಕೃಪಾಪೋಷಿತ ಶಕ್ತಿಗಳ ಮಾತಿಗೆ ಮಣಿಯಲೇಬೇಕು ಅನ್ನುವ ಸನ್ನಿವೇಶ ಸೃಷ್ಟಿಯಾಯಿತಂತೆ. ಹೀಗಾಗಿ ಜ್ಞಾನೇಂದ್ರ, ಹೋಮ್ ಮಿನಿಸ್ಟರ್ ಆದ ನಂತರ ರಾಜ್ಯದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು, ಎಸ್‌ಪಿ, ಡಿಎಸ್‌ಪಿ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯ ವಿಚಾರದಲ್ಲಿ ಮೂಗು ತೂರಿಸುವಂತಿಲ್ಲ ಎನ್ನುವಂತಾಯಿತಂತೆ. ತಮ್ಮ ಬಳಿ ಬರುವ ಅಂತಿಮ ಪಟ್ಟಿಗೆ ಆರಗ ಕೇವಲ ಕೊನೆಯ ಸಹಿ ಹಾಕಬೇಕು ಎಂಬ ವಾತಾವರಣ ನಿರ್ಮಾಣವಾಯಿತಂತೆ.
ಇಷ್ಟು ಹೇಳಿದ ನಂತರ ಓದುಗರಿಗೆ ಅರ್ಥವಾಗಲೇಬೇಕು, ಇಲ್ಲಿಯವರೆಗೂ ಆದ ಪೊಲೀಸ್ ಇಲಾಖೆಯ ವರ್ಗಾವಣೆಗಳಿಗೆ ಶಿಫಾರಸ್ಸು ಮಾಡಿದವರು ಹಳೆಯ ಪಂಟರೇ. ಈ ಬಗ್ಗೆ ಅಗ್ದಿ ನಿಕಟ ಮೂಲಗಳು ಯಡಿಯೂರಪ್ಪನವರ ಕುಟುಂಬದ ಪ್ರಭಾವ ವಿಧಾನಸೌಧದಲ್ಲಿ ಮತ್ತು ಗೃಹಸಚಿವಾಲಯದಲ್ಲಿ ಕಡಿಮೆಯೇನಾಗಿಲ್ಲ. ರಾಜಾಹುಲಿ ಕಡೆಯವರು, ವಿಜಯೇಂದ್ರ ಬಾಹುಬಲಿ ಶಿಫಾರಸ್ಸುಗಳು ಈಗಲೂ ಚಾಲ್ತಿಯಲ್ಲಿವೆ. ಸಿಎಂ ಯಡಿಯೂರಪ್ಪ ಆಗಿದ್ದಾಗಲೂ, ಬೊಮ್ಮಾಯಿ ಆಗಿರುವಾಗಲೂ ಸೂಪರ್ ಸಿಎಂ ಆಗಿಯೇ ವಿಜಯೇಂದ್ರ ಸಾಹೇಬ್ರು ಮುಂದುವರೆದಿದ್ದಾರೆ. ಆಗ ಅವರ ಅಬ್ಬರಗಳು ಕಾಣಿಸುತ್ತಿತ್ತು, ಈಗ ಗುಪ್ತಗಾಮಿನಿ ಅನ್ನುತ್ತವೆ ಅತ್ಯಂತ ವಿಶ್ವಾಸಾರ್ಹ ಸುದ್ದಿಮೂಲ. ಇನ್ನು ಇಂಟರೆಸ್ಟಿಂಗ್ ವಿಚಾರ ಎಂದರೆ ವಿಜಯೇಂದ್ರ ಖುದ್ದು ರೆಫರ್ ಮಾಡುವ ಶಿಫಾರಸ್ಸುಗಳ ಫೈಲುಗಳಿಗೆ ಮಾತ್ರ ಅರಗ ಓಕೆ ಎಂದು ಸೈನ್ ಮಾಡಬೇಕಂತೆ. ನೂರಕ್ಕೂ ಹೆಚ್ಚು ವರ್ಗಾವಣೆಯ ಫೈಲುಗಳು ಸದ್ಯ ವಿಜಯೇಂದ್ರ ಬಾಹುಬಲಿಯ ಗಮನ ಹಾದು ಹೋಮ್ ಮಿನಿಸ್ಟರ್ ಸಾಹೇಬರ ಟೇಬಲ್ ತಲುಪಿದೆ ಎನ್ನುವ ಮಾಹಿತಿಯೂ ಇದೆ. ಹೀಗೆ ಅನಿಯಂತ್ರಿತವಾಗಿ ನಡೆಯುತ್ತಿರುವ ಪೊಲೀಸ್ ಇಲಾಖೆಯ ಟ್ರಾನ್ಸ್‌ಫರ್ ತಮಗೆ ವರ್ಕ್ ಔಟ್ ಆಗುತ್ತಿಲ್ಲ ಅನ್ನುವುದು ಅರಗ ಸಾಹೇಬರಿಗಿಂತ ಅವರ ಪಟಾಲಮ್ಮು ಮತ್ತು ಪರಿವಾರದ ನಾಯಕರನ್ನು ರೊಚ್ಚಿಗೆಬ್ಬಿಸುತ್ತಿದೆ ಅನ್ನುವ ಮಾತುಗಳಿಗೆ ಜೀವ ಬಂದಿದೆ. ಒಇದು ಹೀಗೆಯೇ ಮುಂದುವರೆದರೆ ಸಂಘ ಪರಿವಾರದ ನಾಯಕರ ಅಸಮಧಾನ ಮತ್ತು ಕ್ಷೇತ್ರದ ಜನ ಮುನಿಸು ಎರಡಕ್ಕೂ ತುತ್ತಾಗಬೇಕಾಗುತ್ತದೆ ಎನ್ನುವ ಅಂಜಿಕೆ ಅರಗ ಅವರನ್ನು ಕಾಡುತ್ತಿದೆಯಂತೆ. ಹೀಗಾಗಿಯೇ ಅವರು ಬೆಂಗಳೂರು ಬಿಟ್ಟು ಕ್ಷೇತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನುತ್ತಾರೆ ಕೆಲವರು. ಸದ್ಯಕ್ಕೆ ಅವುಡಗುಚ್ಚಿ ಸಹಿಸಿಕೊಳ್ಳುತ್ತಿರುವ ಅರಗ ಜ್ಞಾನೇಂದ್ರ ಯಾವತ್ತು ಬೇಕಾದರೂ ಸಿಡಿದೇಳಬಹುದು, ಆಗ ಎಲ್ಲರ ಜಾತಕ ಬಯಲಾಗುತ್ತದೆ ನೋಡಿ ಅನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಅವರ ನಿಕಟವರ್ತಿಯೊಬ್ಬರು. ಏನೇ ಆಗಲಿ ಅರಗ ಜ್ಞಾನೇಂದ್ರ ಅವರ ತಾಳ್ಮೆಯನ್ನು ಮೆಚ್ಚಲೇಬೇಕು. ಆದರೆ ಎಲ್ಲಿಯವರೆಗೆ ಸಹಿಸಿಕೊಳ್ತೀರಿ ಜ್ಞಾನೇಂದ್ರ ಸಾಹೇಬರೇ?
-ವಿಶ್ವಾಸ್ ಭಾರದ್ವಾಜ್








