ಸವಿತಾ ಸಮಾಜದ ಜಾತಿ ನಿಂದನೆ ನೋವಿನ ಸಂಗತಿ : ಸಂಪತ್ ಕುಮಾರ್
ಕರ್ನಾಟಕ ಸವಿತಾ ಸಮಾಜದ ಅಧ್ಯಕ್ಷ ಎನ್. ಸಂಪತ್ ಕುಮಾರ್
ಜಾತಿ ನಿಂದನೆಗೆ ಕಡಿವಾಣ ಹಾಕಲು ಸರಕಾರ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು
ಬೆಂಗಳೂರು : ಸವಿತಾ ಸಮಾಜದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಜಾತಿ ನಿಂದನೆ ತಡೆಯುವಂತೆ ಸರಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಸವಿತಾ ಸಮಾಜದ ಸಮುದಾಯಕ್ಕೆ ರಾಜಕೀಯ ಮತ್ತು ಶೈಕ್ಷಣಿಕವಾಗಿ ಅಗತ್ಯ ಮೀಸಲಾತಿಗಳನ್ನು ಕೊಟ್ಟು ಸಮುದಾಯದ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂಬ ಒತ್ತಾಯವೂ ಕೇಳಿ ಬಂತು.
ಕರ್ನಾಟಕ ರಾಜ್ಯ ಸವಿತಾ ಸಮಾಜ ಸಂಘವು ಯಲಹಂಕದ ಹೊಯ್ಸಳ ಆಟದ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸಮುದಾಯದ ಮುಖಂಡರಿಂದ ಈ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಎನ್. ಸಂಪತ್ ಕುಮಾರ್ ಮಾತನಾಡಿ, ‘ಕೋವಿಡ್ ಇದ್ದುದರಿಂದ ಒಂದೂವರೆ ವರ್ಷಗಳ ಕಾಲ ನಾವು ಸರ್ವ ಸದಸ್ಯರ ಸಭೆ ನಡೆಸಲಾಗಲಿಲ್ಲ. ಈಗ ಅನುಮತಿ ಪಡೆದು ಸಭೆ ನಡೆಸುತ್ತಿದ್ದೇವೆ. ರಾಜ್ಯದ ನಾನಾ ಭಾಗಗಳಿಂದ ಸವಿತಾ ಸಮುದಾಯದ ಜನ ಆಗಮಿಸಿದ್ದಾರೆ’ ಎಂದರು.
ನಮ್ಮ ಸಮಾಜವು ಪ್ರತಿಯೊಬ್ಬರಿಗೂ ಕ್ಷೌರ, ಹೇರ್ ಕಟ್, ಮಸಾಜ್ ಇತ್ಯಾದಿಗಳ ಮೂಲಕ ಎಲ್ಲರಿಗುಜ ಅಗತ್ಯವಾದ ಸೇವೆಯನ್ನು ಕಲ್ಪಿಸುತ್ತಿದ್ದೇವೆ. ಆದರೆ ನಮ್ಮ ಸಮುದಾಯವನ್ನು ಜಾತಿಯಿಂದ ನಿಂದನೆ ಮಾಡುತ್ತಾರೆ. ಇದು ತುಂಬಾ ನೋವಿನ ಸಂಗತಿಯಾಗಿದೆ. ಸರಕಾರ ಸೂಕ್ತ ಕಾನೂನು ಮೂಲಕ ಜಾತಿ ನಿಂದನೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.








