ಹೊಸದಿಲ್ಲಿ, ಮೇ 13 : ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಗಳು ಕೊರೋನಾದಿಂದಾಗಿ ದಿಕ್ಕೆಟ್ಟು ಕೂತಿದೆ. ಇದೀಗ ಭಾರತ, ಪ್ರವಾಸೋದ್ಯಮ ನೆಲಕಚ್ಚಿ ಕಂಗಾಲಾಗಿರುವ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಿದೆ. ‘ ಮಿಷನ್ ಸಾಗರ್’ ಎಂಬ ಯೋಜನೆಯಡಿಯಲ್ಲಿ 580 ಟನ್ ಜೀವನಾವಶ್ಯಕ ಆಹಾರೋತ್ಪನ್ನಗಳನ್ನು ಮಾಲ್ಡೀವ್ಸ್ ಗೆ ಐ.ಎನ್.ಎಸ್ ಕೇಸರಿ ಮೂಲಕ ಕೇಂದ್ರ ಸರ್ಕಾರ ಕಳುಹಿಸಿ ಕೊಟ್ಟಿದೆ.
ಮಾಲ್ಡೀವ್ಸ್ ಸರಕಾರ ‘ ಐ.ಎನ್.ಎಸ್. ಕೇಸರಿ ಹಡಗು ಮಾಲೆ ಬಂದರನ್ನು ತಲುಪಿದ್ದು, ಭಾರತೀಯರು 580 ಟನ್ ಆಹಾರವನ್ನು ಕೊಡುಗೆಯಾಗಿ ಕಳುಹಿಸಿದ್ದಾರೆ’ ಎಂದು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದೆ.
ಮಾಲ್ಡೀವ್ಸ್ ಸೇರಿದಂತೆ ಸುತ್ತಮುತ್ತಲಿನ ದ್ವೀಪರಾಷ್ಟ್ರಗಳಿಗೆ ಐ.ಎನ್.ಎಸ್ ಕೇಸರಿ, ಅಗತ್ಯ ಆಹಾರೋತ್ಪನ್ನಗಳೊಂದಿಗೆ ಔಷಧಿ ಮತ್ತು ವೈದ್ಯಕೀಯ ಸಹಾಯಕ ತಂಡವನ್ನು ತುಂಬಿಕೊಂಡು ಭಾನುವಾರ ಭಾರತದಿಂದ ಹೊರಟಿದೆ. ಮಿಷನ್ ಸಾಗರ್ ಪ್ರಧಾನಿ ಮೋದಿಯವರ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಕೊರೊನಾದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಗಳಿಗೆ ಭಾರತ ಸಹಾಯ ಹಸ್ತ ಚಾಚಿದೆ.
ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಮಾಲ್ಡೀವ್ಸ್, ಮಾರಿಷಸ್, ಮಡಗಾಸ್ಕರ್, ಕೊಮೊರಾಸ್, ಸೆಷೆಲ್ಸ್ ರಾಷ್ಟ್ರಗಳು ಕೊರೋನಾದಿಂದ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ನೆರವು ಕೋರಿದ್ದವು.








