ಹೊಸದಿಲ್ಲಿ, ಮೇ 13 : ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವದೇಶೀ ವಸ್ತುಗಳಿಗೆ ಹೊಸ ರೂಪ ಮತ್ತು ಪ್ರಚಾರ ನೀಡಲು ನಿರ್ಧರಿಸಿದ್ದು, ಅರೆ ಸೇನಾಪಡೆ ಕ್ಯಾಂಟೀನ್ ಗಳಲ್ಲಿ ಜೂನ್ 1 ರಿಂದ ಸ್ವದೇಶಿ ನಿರ್ಮಿತ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ, ನಿನ್ನೆ ಪ್ರಧಾನಿ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ, ಭಾರತವನ್ನು ಸ್ವಾವಲಂಬಿಯಾಗಿಸುವ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ಕೊಡಬೇಕು ಎಂದು ಹೇಳಿದ್ದರು. ಇದು ಭಾರತವನ್ನು ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ನಾಯಕತ್ವದೆಡೆ ಕೊಂಡೊಯ್ಯಲಿದೆ.
ಈ ಹಿನ್ನೆಲೆಯಲ್ಲಿ ಜೂನ್ 1ರಿಂದ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಗೃಹ ಸಚಿವಾಲಯ ನಿರ್ಧರಿಸಿದೆ. ಇದರಿಂದಾಗಿ ಸುಮಾರು 10 ಲಕ್ಷ ಸಿಎಪಿಎಫ್ ಸಿಬ್ಬಂದಿಗಳು ಮತ್ತು ಸುಮಾರು 50 ಲಕ್ಷ ಅವರ ಕುಟುಂಬ ಸದಸ್ಯರು ಸ್ವದೇಶಿ ವಸ್ತುಗಳನ್ನು ಬಳಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿ ಜನರು ಇನ್ನು ಮುಂದೆ ಆತ್ಮ ನಿರ್ಭಾರ್ ಭಾರತ್ ಅಥವಾ ಸ್ವಾವಲಂಬನೆ ಮತ್ತು ಸ್ಥಳೀಯತೆಗೆ ಆದ್ಯತೆ ಕೊಡಬೇಕೆಂದು, ಲೋಕಲ್ ಎಂದು ಕರೆಯಲ್ಪಡುವ ಸ್ಥಳೀಯ ಉತ್ಪನ್ನಗಳನ್ನು ಗ್ಲೋಬಲ್ ಬ್ರ್ಯಾಂಡ್ ಆಗಿಸಲು ಕರೆ ನೀಡಿದ್ದರು.









