ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಚಂದ್ರು ರೀತಿ ಪರ್ಮನೆಂಟ್ ಸಿಎಂ : ಸೋಮಶೇಖರ್
ಮೈಸೂರು : ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಚಂದ್ರು ಅವರ ರೀತಿಯಲ್ಲಿ ಪರ್ಮನೆಂಟ್ ಸಿಎಂ ಎಂದು ಸಚಿವ ಎಸ್.ಟಿ.ಸೋಮಶೇಖರ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಎಸ್.ಟಿ.ಸೋಮಶೇಖರ್, ಪಾದಯಾತ್ರೆ ಮಾಡಿದ್ರೆ ಮುಖ್ಯಮಂತ್ರಿ ಆಗ್ತೀನಿ ಅಂತ ಅನ್ಕೊಂಡಿದ್ರೆ ಅದು ಡಿ ಕೆ ಶಿವಕುಮಾರ್ ಕನಸು. ಡಿಕೆಶಿ ಯಾವ ಸಿಎಂ ಆಗ್ತಾರೆ.? ನಮ್ಮ ಮುಖ್ಯಮಂತ್ರಿ ಚಂದ್ರು ತರ ಪರ್ಮನೆಂಟ್ ಸಿಎಂ ಆಗ್ಬೇಕು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಕಾಂಗ್ರೆಸ್ ಪಾದಯಾತ್ರೆ ಕಾಂಗ್ರೆಸ್ ನಾಯಕರ ದೊಡ್ಡ ಗಿಮಿಕ್. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಅವರು ಕೇಂದ್ರದ ನಾಯಕರನ್ನ ಭೇಟಿ ಮಾಡಿ ಯೋಜನೆ ಜಾರಿಗೆ ಒತ್ತಡ ಹೇರಿದ್ದಾರೆ.
ಶೀಘ್ರದಲ್ಲೇ ಮೇಕೆದಾಟು ಯೋಜನೆಗೆ ಅನುಮತಿ ಸಿಗಲಿದೆ. ಇದನ್ನ ಅರಿತ ಕಾಂಗ್ರೆಸ್ ನಾಯಕರು ಪಾದಯಾತ್ರೆಯ ದೊಡ್ಡ ಗಿಮಿಕ್ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಮಾತನಾಡಿ, ಇದು ಕೇವಲ ಮಾಧ್ಯಮ ಸೃಷ್ಠಿ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ರಾಷ್ಟ್ರ ನಾಯಕರೆಲ್ಲಾ ಬೊಮ್ಮಾಯಿಯೇ ಅವಧಿ ಪೂರೈಸುತ್ತಾರೆ ಅಂತ ಹೇಳಿದ್ದಾರೆ. ಖುದ್ದು ಅಮಿತ್ ಷಾ ರವರೇ ಬಹಿರಂಗ ವೇದಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದು ಹೇಳಿದ್ದಾರೆ.









