ರೈತರ ಪರ ರಾಜ್ಯ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ : ಬೊಮ್ಮಾಯಿ Bommai saaksha tv
ಮೈಸೂರು : ರೈತರ ಪರ ರಾಜ್ಯ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ. ರೈತರ ಧ್ವನಿಗೆ ನಾವು ಧ್ವನಿಯಾಗಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ರೈತ ಸಮಾವೇಶ ನಡೆದಿದ್ದು, ರೈತ ಹೋರಾಟದಲ್ಲಿ 40ವರ್ಷ ಪೂರೈಸಿರುವ ಕುರುಬೂರು ಶಾಂತಕುಮಾರ್ ಸನ್ಮಾನ ಮಾಡಲಾಯಿತು. ಅಲ್ಲದೇ ಕುರುಬೂರು ಶಾಂತಕುಮಾರ್ ಅವರಿಗೆ ರೈತರತ್ನ ಬಿರುದು ನೀಡಿ ಗೌರವಿಸಲಾಯಿತು.
ಈ ಅಭಿನಂದನಾ ಸಮಾರಂಭಕ್ಕೆ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಬೊಮ್ಮಾಯಿ, ರೈತರು ಎಲ್ಲಾ ರಾಜಕೀಯ ಪಕ್ಷಗಳ ಬೆನ್ನೆಲುಬಿದ್ದಂತೆ. ಚಳವಳಿ ಹಾಗು ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ.
ಆಹಾರ ಕೊಂಡುಕೊಂಡವನ ಜೇಬು ಭರ್ತಿಯಾಗಿದೆ. ಆಹಾರ ಉತ್ಪಾದನೆ ಮಾಡಿದ ರೈತನ ಜೇಬು ಖಾಲಿಯಾಗಿದೆ.
ಉತ್ಪಾದನೆ ಕಡಿಮೆ ಆದರೂ ಸಮಸ್ಯೆ, ಹೆಚ್ಚಾದರೂ ಸಮಸ್ಯೆಯಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಹಾರ ಉತ್ಪಾದನೆ ಜಾಸ್ತಿಯಾಗಿದೆ.
ಕೃಷಿ ಮತ್ತು ರೈತನ ಮೇಲೆ ನಮ್ಮ ಲಕ್ಷ್ಯ ಇರಬೇಕು. ರೈತರ ಆದಾಯ ಹೆಚ್ಚಾದರೆ ರೈತಾಪಿ ವರ್ಗದ ಸ್ಥಿತಿ ಸುಧಾರಿಸಲಿದೆ.
ಕೇವಲ ಕೃಷಿಯ ಆದಾಯದಿಂದ ರೈತನ ಬದುಕು ಹಸನಾಗುತ್ತಿಲ್ಲ. ಹಾಗಾಗಿ ಇತರ ಮೂಲಗಳಿಂದ ರೈತರ ಆದಾಯ ಹೆಚ್ಚಿಸುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ಇನ್ನು ಬೆಳೆ ನಿಯಂತ್ರಣ, ಬೆಲೆ ನಿಗಧಿ ಬಹು ದೊಡ್ಡ ಸಮಸ್ಯೆಯಾಗಿದೆ. ಡಬ್ಯ್ಲುಟಿಒ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ನಮ್ಮ ಹಣೆ ಬರಹ ಬದಲಾಯಿತು.
ಈ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದಾಗ ದೂರಗಾಮಿ ಪರಿಣಾಮಗಳು ಬೀರುತ್ತವೆ. ಇದೆಲ್ಲದರ ಪರಿಣಾಮ ಸಾಲದ ಸಂಕೋಲೆಯಲ್ಲಿ ರೈತ ಸಿಲುಕಿದ್ದಾನೆ.
ಅಂತರರಾಷ್ಟ್ರೀಯ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಿಂದ ಹೊರ ಬಂದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.










