ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಕೆ – ಕಾಳಿಚರಣ್ ಮಹರಾಜ್ ಅರೆಸ್ಟ್…
ಮಹಾತ್ಮ ಗಾಂಧಿಜಿ ಅವರನ್ನು ನಿಂದಿಸಿದ ಕಾಳಿಚರಣ್ ಮಹಾರಾಜ್ ಅವರನ್ನು ಮಧ್ಯಪ್ರದೇಶದ ಖಜುರಾಹೊದಲ್ಲಿ ಬಂಧಿಸಲಾಗಿದೆ. ರಾಯಪುರ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಗುರುವಾರ ಬಂಧಿಸಿದ್ದಾರೆ. ಇವರ ವಿರುದ್ಧ ರಾಯಪುರ, ಪುಣೆ ಮತ್ತು ಅಕೋಲಾದಲ್ಲಿ ಪ್ರಕರಣಗಳು ದಾಖಲಾಗಿದ್ದವು. ಮಹಾತ್ಮಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಅವರು ತಲೆಮರೆಸಿಕೊಂಡಿದ್ದರು. ಆದರೆ ಮಧ್ಯಪ್ರದೇಶದ ಗೃಹ ಸಚಿವರು ಇವರ ಬಂಧನದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಳಿಚರಣ್ ಅವರ ಬಂಧನದ ಬಗ್ಗೆ ಅವರ ಕುಟುಂಬ ಮತ್ತು ವಕೀಲರಿಗೆ ಮಾಹಿತಿ ನೀಡಲಾಗಿದೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಸದ್ಯದಲ್ಲೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಖಜುರಾಹೊದಿಂದ 25 ಕಿ.ಮೀ ದೂರದಲ್ಲಿರುವ ಬಾಗೇಶ್ವರ ಧಾಮ್‌ನಲ್ಲಿರುವ ಬಾಡಿಗೆ ಮನೆಯಿಂದ ರಾಯ್‌ಪುರ ಪೊಲೀಸರು ಗುರುವಾರ ಮುಂಜಾನೆ 4 ಗಂಟೆಗೆ ಬಂಧಿಸಿದ್ದಾರೆ. ರಾಯ್‌ಪುರ ಪೊಲೀಸರು ಅವರನ್ನು ಛತ್ತೀಸ್‌ಗಢಕ್ಕೆ ಕರೆದೊಯ್ಯಲಿದ್ದಾರೆ.
ರಾಯಪುರದಲ್ಲಿ ನಡೆದ ಧರ್ಮ ಸಂಸತ್ತಿನ ಸಮಾರೋಪ ದಿನದಂದು ಶನಿವಾರ ಮಹಾರಾಷ್ಟ್ರದಿಂದ ಬಂದಿದ್ದ ಕಾಳಿಚರಣ್ ವೇದಿಕೆಯ ಮೇಲಿಂದ ಗಾಂಧೀಜಿ ಕುರಿತು ಮಾತನಾಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಮಿನ ಗುರಿಯಾಗಿದೆ ಎಂದು ಹೇಳಿದರು. 1947 ರಲ್ಲಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಹೇಗೆ ವಶಪಡಿಸಿಕೊಂಡರು ಎಂಬುದನ್ನು ನಾವು ನಮ್ಮ ಕಣ್ಣಾರೆ ನೋಡಿದ್ದೇವೆ. ಮೋಹನ್‌ದಾಸ್ ಕರಮಚಂದ್ ಗಾಂಧಿ ಆ ಸಮಯದಲ್ಲಿ ದೇಶವನ್ನು ನಾಶಪಡಿಸಿದರು. ಅವನನ್ನು ಕೊಂದ ನಾಥೂರಾಂ ಗೋಡ್ಸೆಗೆ ನಮನಗಳು. ಎಂಬ ಹೇಳಿಕೆ ನೀಡಿದ್ದರು.
ಕಾಳಿಚರಣ್ ನನ್ನು ಬಂಧಿಸುವ ಪ್ರಕ್ರಿಯೆಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಟ್ವೀಟ್ ಮಾಡಿದ್ದಾರೆ – ಛತ್ತೀಸ್‌ಗಢ ಪೊಲೀಸರು ತಮ್ಮ ಕ್ರಮದ ಬಗ್ಗೆ ಮಧ್ಯಪ್ರದೇಶ ಪೊಲೀಸರಿಗೆ ತಿಳಿಸಬೇಕಿತ್ತು. ಇದು ಅಂತರರಾಜ್ಯ ಶಿಷ್ಟಾಚಾರವನ್ನು ಉಲ್ಲಂಘಿಸಿದೆ. ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಛತ್ತೀಸ್‌ಗಢ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ.