ಮಕರ ಸಂಕ್ರಾಂತಿಯ ದಿನವಾದ ನಿನ್ನೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ವಿಸ್ಮಯಕ್ಕೆ ಮೋಡ ಅಡ್ಡಿ ಪಡಿಸಿದೆ. ಈ ಬಾರಿ ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶವಾಗಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಗಿದೆ.
ಮೋಡ ಕವಿದ ವಾತಾವರಣ:
ಸಂಜೆ 5:14 ರಿಂದ 5:17ರ ವರೆಗೆ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶಿಸಬೇಕಿತ್ತು. ಆದರೆ ಮೋಡ ಕವಿದ ವಾತಾವರಣದಿಂದ ಸೂರ್ಯರಶ್ಮಿ ಶಿವಲಿಂಗಕ್ಕೆ ಸ್ಪರ್ಶ ಸಾಧ್ಯವಾಗಲಿಲ್ಲ. ಇತಿಹಾಸದಲ್ಲೇ 3ನೇ ಬಾರಿಗೆ ಗವಿಗಂಗಾಧರೇಶ್ವರನ ಮೇಲೆ ಸೂರ್ಯರಶ್ಮಿ ಸ್ಪರ್ಶವಾಗಿಲ್ಲ ಎಂದು ತಿಳಿದುಬಂದಿದೆ.
ಭಕ್ತರಲ್ಲಿ ಆತಂಕ:
ಈ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಹಿಂದಿನ ಬಾರಿ ಸೂರ್ಯರಶ್ಮಿ ಸ್ಪರ್ಶಿಸದಿದ್ದಾಗ ಕೋವಿಡ್ ಮಹಾಮಾರಿ ಬಂದು ಅಪಾರ ಸಾವು ನೋವು ಸಂಭವಿಸಿತ್ತು. ಈ ಬಾರಿಯೂ ಸಹ ಸೂರ್ಯರಶ್ಮಿ ಸ್ಪರ್ಶವಾಗದಿರುವುದರಿಂದ ಭಕ್ತರು ಮುಂದಿನ ದಿನಗಳಲ್ಲಿ ಏನಾದರೂ ಗಂಡಾಂತರ ಕಾದಿದೆಯಾ ಎಂಬ ಭಯದಲ್ಲಿ ಇದ್ದಾರೆ.
ಅರ್ಚಕರ ಸ್ಪಷ್ಟನೆ:
ಈ ಬಗ್ಗೆ ದೇವಸ್ಥಾನದ ಅರ್ಚಕ ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಗಂಗಾಧರೇಶ್ವರ ಸ್ವಾಮಿಗೆ ಸೂರ್ಯ ಪೂಜೆಯಾಗಿದೆ. ಆದರೆ ಪ್ರಕೃತಿ ಕಾರಣದಿಂದ ನಮಗೆ ಗೋಚರವಾಗಿಲ್ಲ. ಸೂರ್ಯರಶ್ಮಿ ಖಂಡಿತವಾಗಲೂ ಶಿವಲಿಂಗಕ್ಕೆ ಸ್ಪರ್ಶಿಸಿದೆ. ಮೋಡ ಕವಿದ ವಾತಾವರಣದಿಂದ ಸೂರ್ಯರಶ್ಮಿ ಕಂಡುಬಂದಿಲ್ಲ ಎಂದು ತಿಳಿಸಿದರು.
ಅರ್ಚಕರು ಭಕ್ತರಿಗೆ ಧೈರ್ಯ ತುಂಬುತ್ತಾ, ಪ್ರಸಕ್ತ ವರ್ಷ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೂರ್ಯನ ರಶ್ಮಿ ನಮಗೆ ಕಾಣಿಸದಿದ್ದರೂ, ಗಂಗಾಧರೇಶ್ವರ ಸ್ವಾಮಿ ಎಲ್ಲರಿಗೂ ದರ್ಶನ ನೀಡುತ್ತಾನೆ ಎಂದು ಹೇಳಿದರು.








