ಹಗಲಲ್ಲೇ ಬ್ಯಾಂಕ್ ಗೆ ನುಗ್ಗಿ ದರೋಡೆ , ಸಿಬ್ಬಂದಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು – VIDEO
ಮುಂಬೈ: ಹಗಲಿನಲ್ಲೇ ದುಷ್ಕರ್ಮಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್ ಒಂದಕ್ಕೆ ನುಗ್ಗಿ ಹಣ ದೋಚಿ ಸಿಬ್ಬಂದಿ ಒಬ್ಬರ ಹತ್ಯೆಗೈದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಇಬ್ಬರು ಮುಸುಕುಧಾರಿಗಳು ನಿನ್ನೆ ದಹಿಸರ್ ಪ್ರದೇಶದಲ್ಲಿರುವ SBI ಬ್ಯಾಂಕ್ ಗೆ ನುಗ್ಗಿದ್ದು, ಬ್ಯಾಂಕ್ ಉದ್ಯೋಗಿಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಬ್ಯಾಂಕ್‍ನಲ್ಲಿದ್ದ 2.5 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ.
ದರೋಡೆಕೋರರು ಬ್ಯಾಂಕ್ ಒಳಗೆ ಬಂದ ತಕ್ಷಣ ಬಂದೂಕನ್ನು ಹಿಂಡಿದುಕೊಂಡು ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಈ ವೇಳೆ ಸಿಬ್ಬಂದಿಯೊಬ್ಬರಿಗೆ ಗುಂಡು ಹಾರಿಸಿದ್ದಾರೆ. ನಂತರ ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಉತ್ತರ ವಲಯದ ಹೆಚ್ಚುವರಿ ಸಿಪಿ ಪ್ರವಿಂದ್ ಪಡವಾಲ್ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬ್ಯಾಂಕ್‍ನ ದಹಿಸರ್ ಶಾಖೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಎಸ್‍ಬಿಐ ಬ್ಯಾಂಕ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದರೋಡೆಕೋರರು ಎಸ್‍ಬಿಐ ಗುತ್ತಿಗೆ ಉದ್ಯೋಗಿ ಮೇಲೆ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಹಣವನ್ನು ದರೋಡೆ ಮಾಡಿದ ನಂತರ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಕಾರ್ಫ್ ಮತ್ತು ಕ್ಯಾಪ್‍ನಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಈ ಪರಿಣಾಮ ಅವರ ಮುಖವನ್ನು ನಾವು ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ದರೋಡೆಕೋರರು ಸುಮಾರು 20 ರಿಂದ 25 ವರ್ಷ ವಯಸ್ಸಿನವರಿರಬಹುದು. ಅವರು ದಹಿಸರ್ ರೈಲ್ವೆ ನಿಲ್ದಾಣದ ಕಡೆಗೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.