ಅವರನ್ನು ಅವೆರಡು ಪ್ರಶ್ನೆಗಳನ್ನು ನೇರವಾಗಿ ಕೇಳಬೇಕಿತ್ತು…
ಮೂರ್ನಾಲ್ಕು ಮಾಧ್ಯಮ ಸಂಸ್ಥೆಗಳಲ್ಲಿ ನನಗೆ ಬಾಸ್ ಆಗಿದ್ದ, ನನ್ನ ಸದಾಕಾಲದ ಸಂಪಾದಕರಾದ ಮತ್ತು ಸದ್ಯ ನಮ್ಮ ಮೀಡಿಯಾ ಮ್ಯಾನೇಜ್ಮೆಂಟ್ ಕಾಯಕದ ಪಾರ್ಟನರ್ ಸಹ ಆಗಿರುವ ಸನತ್ ರೈಯವರಿಗೆ ಮುತ್ತಪ್ಪ ರೈ ಆತ್ಮೀಯರಾಗಿದ್ದರು. ಅವರು ಕೆಲವು ದಿನಗಳ ಹಿಂದೆ ಎಲ್ಲಾ ಮಾಧ್ಯಮಗಳಿಗೆ ಸಂದರ್ಶನ ನೀಡಿದಂತೆ, ಸನತ್ ರೈ ಅವರಿಗೂ ಸಂದರ್ಶನ ನೀಡಲು ಸಮಯ ನಿಗದಿ ಮಾಡಿದ್ದರು. ನಮ್ಮ ಸಾಕ್ಷ್ಯ ಟಿವಿ ವೆಬ್ ಸೈಟಿಗೆ ಮುತ್ತಪ್ಪ ರೈರವರನ್ನು ಸಂದರ್ಶಿಸಲು ನಾನು ಮತ್ತು ಸನತ್ ಹೋಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ನಿರಂತರವಾಗಿ ಮಾತಾಡಿ ದಣಿದಿದ್ದರಿಂದ ಮತ್ತು ಕೊಂಚ ಆರೋಗ್ಯದಲ್ಲೂ ಏರುಪೇರಾಗಿದ್ದರಿಂದ ನಮ್ಮ ಆ ದಿನದ ಸಂದರ್ಶನ ಸಾಧ್ಯವಾಗಲಿಲ್ಲ. ಒಂದು ವೇಳೆ ಅವತ್ತು ಮುತ್ತಪ್ಪ ರೈಯವರನ್ನು ಸಂದರ್ಶಿಸಲು ಹೋಗಿದ್ದಿದ್ದರೆ ಅವರೊಂದಿಗೆ ನಾನೊಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ನಾನು ಮೆಚ್ಚಿನ ಸಾಹಿತಿಗಳನ್ನು ಹೊರತುಪಡಿಸಿ ಯಾವ ಗಣ್ಯರು, ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದಿಲ್ಲ. ಮುತ್ತಪ್ಪ ರೈರನ್ನು ಈ ಹಿಂದೆ ನಾನು ವಾಹಿನಿಗಳಲ್ಲಿ ವರದಿಗಾರನಾಗಿದ್ದಾಗ ಅನೇಕ ಬಾರಿ ಬಿಡದಿಯ ಅವರ ಮನೆಯಲ್ಲಿ, ಪ್ರೆಸ್ ಕ್ಲಬ್ಬಿನಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ನೋಡಿದ್ದೇನೆ. ಆಗೆಲ್ಲಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಯಾವತ್ತೂ ಅನ್ನಿಸಿರಲಿಲ್ಲ. ಸುರಸುಂದರನಾಗಿದ್ದಾಗ, ದೃಢಕಾಯರಾಗಿದ್ದಾಗ, ಅದ್ಭುತ ಅಂಗಸೌಷ್ಟವವಿದ್ದಾಗ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕು ಅನ್ನಿಸದಿದ್ದಿದ್ದು, ಅವರು ಕ್ಯಾನ್ಸರ್ ರೋಗದಿಂದ ಜರ್ಜರಿತರಾದ ನಂತರ ‘ಟಿಕೆಟ್ ಕನ್ಫರ್ಮ್’ ಆಗಿದೆ ಎಂದು ಯಾವತ್ತು ಹೇಳಿದರೂ, ಆಗ ದುರ್ಬಲ ಕಾಯದ ಮುತ್ತಪ್ಪ ರೈ ಜೊತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎನ್ನುವ ಇಚ್ಛೆಯಾಗಿದ್ದು ಅಚ್ಚರಿಯೇ. ಕಾರಣ ಅಂತಿಮ ಹಂತದ ಕ್ಯಾನ್ಸರ್ ಬಾದೆಯಿದ್ದರೂ ಅವರು ಬದುಕಿದ್ದು ಅವರೊಳಗಿದ್ದ ಜೀವನಪ್ರೀತಿ ಮತ್ತು ಅದಮ್ಯ ವಿಲ್ ಪವರ್ ಬಲದಿಂದ. ಅವತ್ತು ಒಂದು ವೇಳೆ ಮುತ್ತಪ್ಪ ರೈರವರನ್ನು ಭೇಟಿ ಮಾಡಿದ್ದಿದ್ದರೆ ಖಂಡಿತಾ ಒಂದು ಫೋಟೋ ತೆಗೆಸಿಕೊಳ್ಳುತ್ತಿದ್ದೆ.
ಖಂಡಿತವಾಗಿ ನಾನು ಮತ್ತು ಸನತ್ ಯಾರೂ ಮಾಡದ ರೀತಿಯಲ್ಲಿ ವಿಭಿನ್ನವಾಗಿ ಒಂದು ಸಂದರ್ಶನ ಮಾಡುತ್ತಿದ್ದೆವು. ಮತ್ತು ಅವೆರಡು ಪ್ರಶ್ನೆಗಳನ್ನು ಖಂಡಿತಾ ಕೇಳುತ್ತಿದ್ದೆ.
ಭೂಗತ ಲೋಕದ ಅಧಿಪತಿಯಾಗಿ ಮೆರೆಯುತ್ತಿದ್ದ ಮುತ್ತಪ್ಪ ರೈ, ಏಕಾಏಕಿ ಹಾಗೆ ಭೂಗತದ ನಂಟು ಕಳಚಿಕೊಂಡು ಹೊರಬರುವುದು ಅಷ್ಟು ಸುಲಭದ ಸಂಗತಿಯೇನಾಗಿರಲಿಲ್ಲ. ಒಂದು ಕಾಲದಲ್ಲಿ ಕತ್ತಲಲೋಕವನ್ನು ಅಕ್ಷರಶಃ ಅನಭಿಷಿಕ್ತ ದೊರೆಯಾಗಿ ಆಳಿದ ಮುತ್ತಪ್ಪ ರೈರವರಿಗೆ ಅದೇನು ಹೂವಿನ ಪಲ್ಲಕ್ಕಿಯಾಗಿರಲಿಲ್ಲ; ಭೂಗತ ಲೋಕ ಯಾವತ್ತಿದ್ದರೂ ಹುಲಿಯ ಮೇಲಿನ ಸವಾರಿಯೇ. ಅವರು ಜಾಗತಿಕ ಅಂಡರ್ ವರ್ಲ್ಡ್ ನಲ್ಲಿದ್ದಾಗಲೇ ಅವರ ಮೇಲೆ ಅನೇಕ ಸಲ ಹತ್ಯಾ ಪ್ರಯತ್ನಗಳಾಗಿದ್ದವು. ಮುಂಬೈ ಸರಣಿ ಬಾಂಬ್ ನಡೆಸಿದ ವಿಷಜಂತು ದಾವೂದ್ ಗ್ಯಾಂಗ್ ಮುತ್ತಪ್ಪರನ್ನು ತೆಗೆಯಲು ಸಮಯ ಕಾಯುತ್ತಿತ್ತು. ಅವರು ಭೂಗತ ಲೋಕವನ್ನು ತೊರೆದ ನಂತರವೂ ಅವರ ಮೇಲೆ ಒಂದೆರಡು ಬಾರಿ ಅಟೆಂಪ್ಟ್ ಆಗಿತ್ತು. ಹೀಗಿದ್ದಾಗ ಅವರು, ಇನ್ನು ಸಾಕು ಈ ತಾಮಸ ಲೋಕದ ವಹಿವಾಟೆಂದು ನಿರ್ಧರಿಸುವ ಹಿಂದಿದ್ದ ಮನಸ್ಥಿತಿ ಹೇಗಿತ್ತು? ಅದಕ್ಕಿದ್ದ ಪ್ರಬಲ ಕಾರಣವೇನು? ಅವರು ಈವರೆಗೆ ಕೊಟ್ಟ ಕಾರಣಗಳಲ್ಲದೆ ಬೇರೆ ಮಹತ್ವದ ಇನ್ನೊಂದು ಕಾರಣವಿತ್ತಾ? ಗೊತ್ತಿಲ್ಲ; ಹೇಳಲು ಈಗ ಮುತ್ತಪ್ಪ ರೈ ಇಲ್ಲ. ಆದರೆ ಅವತ್ತು ಸಂದರ್ಶನಕ್ಕೆ ಹೋಗಿದ್ದರೆ ಇದೊಂದು ಪ್ರಶ್ನೆಯನ್ನು ಕೇಳಬೇಕೆಂದಿದ್ದೆ.
ಮುತ್ತಪ್ಪ ರೈ ಬಗ್ಗೆ ನನ್ನ ಕಾಡುತ್ತಿದ್ದ ಇನ್ನೊಂದು ಪ್ರಶ್ನೆ, ಪತ್ನಿ ರೇಖಾ ಸಿಂಗಾಪುರದಲ್ಲಿ ನಿಧನರಾದ ನಂತರ ಅವರು ಅನುರಾಧರನ್ನು ಏಕೆ ಮದುವೆಯಾದರು? ಈ ಪ್ರಶ್ನೆ ನೇರವಾಗಿ ಕೇಳುತ್ತಿದ್ದೆನಾ ಇಲ್ಲವಾ ಗೊತ್ತಿಲ್ಲ. ಆದರೆ ಈ ಪ್ರಶ್ನೆ ನನ್ನೊಳಗೆ ಇದ್ದಿದ್ದು ನಿಜ. ಅವರ ಆರೋಗ್ಯ ನೋಡಿಕೊಳ್ಳಲು ಒಂದಿಡೀ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಸ್ಟಾಫ್ ನರ್ಸ್ ಗಳನ್ನು ಸಂಬಳಕ್ಕಿಟ್ಟುಕೊಳ್ಳುವ ಸ್ಥಿತಿವಂತಿಕೆ ಇತ್ತು. ಮುತ್ತಪ್ಪ ರೈ ಕೊಂಚ ಭಾವುಕ ಜೀವಿ ಅನ್ನುವುದು ಸತ್ಯ. ಅವರು ತಮ್ಮ ಮೊದಲ ಪತ್ನಿ ರೇಖಾರನ್ನು ಮರೆತಿರಲಿಲ್ಲ. ಹಾಗಿದ್ದಾಗ ಅನುರಾಧಾರನ್ನು ಮದುವೆಯಾಗುವ ಹಿಂದೆ ಇದ್ದ ಒತ್ತಡಗಳಾದರೂ ಏನಿತ್ತು? ಅನಿವಾರ್ಯತೆ ಏನಿತ್ತು? ಇದು ಮುತ್ತಪ್ಪ ರೈರವರ ತೀರಾ ಖಾಸಗಿಯಾದ ಸಂಗತಿ ಎನ್ನುವುದು ನಿಜ, ಆದರೆ ಎರಡನೇ ಮದುವೆಯಾದ ನಂತರ ಮುತ್ತಪ್ಪ ರೈ ಬದುಕಿನ ಕಷ್ಟಕಾಲಗಳು ಶುರುವಾಗಿದ್ದು ಕಾಕತಾಳೀಯ ಮಾತ್ರವೇ?
ಮುತ್ತಪ್ಪ ರೈ ಭೂಗತವನ್ನು ಆಳುತ್ತಿದ್ದಾಗ ಪಟ್ಟ ಪಾಡುಗಳಿಗಿಂತ ಅವರು ತಮ್ಮ ಕಡೆಯ ದಿನಗಳಲ್ಲಿ ಅನುಭವಿಸಿದ ಹಿಂಸೆ ಹೆಚ್ಚು. ಆಯುಧ ಪೂಜೆಯ ದಿನ ಗನ್ ಗಳ ಪೂಜೆ ಮಾಡಿದ್ದರ ಫೋಟೋಗಳನ್ನು ಉದ್ದೇಶ ಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅವರ ವಿರುದ್ಧ ಎಫ್ ಐ ಆರ್ ದಾಖಲಾಗುವಂತೆ ಮಾಡಲಾಯ್ತೆ? ಉದ್ಯಮಿಯೊಬ್ಬರಿಗೆ ಮುತ್ತಪ್ಪ ರೈ ತೀರಾ ಮೆತ್ತಗಾಗಿ ಸಾಯುವ ಕಾಲದಲ್ಲಿ ಜೀವ ಬೆದರಿಕೆ ಒಡ್ಡಿದರೆ? ರವಿ ಪೂಜಾರಿ ಬಂಧನದ ನಂತರ ಕ್ರೈಂ ಬ್ರಾಂಚ್ ಪೊಲೀಸರು ಮುತ್ತಪ್ಪ ರೈರವರನ್ನು ಹೆಡೆಮುರಿ ಕಟ್ಟಲು ಯೋಚಿಸಿದ್ದರಾ? ಅವರ ಅನಾರೋಗ್ಯವೊಂದೇ ಕಾರಣಕ್ಕೆ ಮುತ್ತಪ್ಪ ರೈ ಜೈಲಿಗೆ ಹೋಗದೆ ಉಳಿದುಕೊಂಡರಾ? ಹೀಗೆ ಅನೇಕ ತಾಪತ್ರಯಗಳನ್ನು ಗಮನಿಸಿ ನೋಡಿ. ಇವೆಲ್ಲವೂ ಆಗಿದ್ದು ಅವರು ಎರಡನೆಯ ಮದುವೆಯಾದ ನಂತರವೇ. ಅವರ ಆಸ್ತಿ ಹಂಚಿಕೆ ತಲೆನೋವು ಕೂಡಾ ಮುತ್ತಪ್ಪ ರೈರವರನ್ನು ಹೈರಾಣಾಗಿಸಿತ್ತು ಎನ್ನುತ್ತವೆ ಕೆಲವು ಮೂಲಗಳು. ಅಸಲಿಗೆ ಅನುರಾಧ ವ್ಯಕ್ತಿತ್ವ ಎಂತದ್ದು ಅನ್ನುವುದು ಯಾರಿಗೂ ಗೊತ್ತಿಲ್ಲ. ಅನುರಾಧಾ ಅವರಿಂದ ದೂರವಾಗಿದ್ದು ಯಾಕೆ? ಮುತ್ತಪ್ಪ ರೈರವರೇ ಅವರನ್ನು ದೂರವಿಟ್ಟರಾ? ಕಾರಣಗಳೇನು? ಇದೂ ಹೊರಜಗತ್ತಿಗೆ ಗೊತ್ತಿಲ್ಲ. ಅನುರಾಧ ಹೇಳಿದರೆ ಮಾತ್ರ ಸತ್ಯದ ಒಂದು ಮುಖ ಗೊತ್ತಾಗುತ್ತದೆ. ಇನ್ನೊಂದು ಆಯಾಮದ ಸ್ಪಷ್ಟೀಕರಣ ಕೊಡಲು ಮುತ್ತಪ್ಪ ರೈ ಇಲ್ಲ.
ಮುತ್ತಪ್ಪ ರೈ ಭೂಗತ ಜಗತ್ತನ್ನು ಬಿಟ್ಟ ನಂತರ ತಮ್ಮ ಅಸ್ಥಿತ್ವ ಗುರುತಿಸಿಕೊಳ್ಳಲು ಜಯ ಕರ್ನಾಟಕ ಕಟ್ಟಿದರು. ಅವರು ಮತ್ತೆಂದೂ ಅಪರಾಧಗಳಲ್ಲಿ ಭಾಗಿಯಾಗಲಿಲ್ಲ; ಅಪರಾಧ ಲೋಕದ ನೆಂಟಸ್ತಿಕೆಯನ್ನು ಪೂರ್ಣವಾಗಿ ಕಳಚಿಕೊಂಡು ಹೊರಬಂದರು. ಭೂಗತ ತೊರೆದವರು ಸಾಂಸ್ಕೃತಿಕವಾಗಿ ಮುಖವಿಟ್ಟುಕೊಳ್ಳುವುದು ಮತ್ತು ಸಂಘಟನೆ ಕಟ್ಟುವುದು ಸಾಮಾನ್ಯ ಸಂಗತಿ. ಅಗ್ನಿ ಶ್ರೀಧರ್ ಸಹ ಅಂತದ್ದೊಂದು ಸಾಂಸ್ಕೃತಿಕ ಮತ್ತು ಸಂಘಟನಾತ್ಮಕ ರಕ್ಷಾಕವಚ ಸೃಷ್ಟಿಸಿಕೊಂಡಿದ್ದಾರೆ ಎನ್ನುವುದನ್ನು ಗಮನಿಸಿ. ಮುತ್ತಪ್ಪ ರೈ ಮಾಜಿ ಡಾನ್ ಎಂದು ಕರೆಸಿಕೊಳ್ಳುವುದಕ್ಕಿಂತ ಜಯ ಕರ್ನಾಟಕ ಸಂಸ್ಥಾಪಕ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಿದ್ದರು. ಪುತ್ತೂರಿನಿಂದ ಮಲೇಶಿಯಾ ತನಕ, ವಿಜಯಾ ಬ್ಯಾಂಕಿನ ಉದ್ಯೋಗದಿಂದ ಡಾನ್ ಪಟ್ಟದ ತನಕ ಅವರ ಬದುಕಿನ ಚಿತ್ರಣ ಎಲ್ಲರಿಗೂ ತಿಳಿದಿರುವಂತದ್ದೆ. ರಾಮ್ ಗೋಪಾಲ್ ವರ್ಮಾ, ಮುತ್ತಪ್ಪ ರೈರವರ ಬಂದೂಕಿನ ಬದುಕನ್ನು ವಿವೇಕ್ ಓಬೇರಾಯ್ ಪಾತ್ರದ ಮೂಲಕ ತೋರಿಸಲು ಸಿದ್ಧ ಮಾಡಿಕೊಂಡಿದ್ದರು. ಅವೆಲ್ಲದರಾಚೆಗೆ ಮುತ್ತಪ್ಪ ರೈ ಎನ್ನುವ ಹೆಸರಿಗೆ ಜನ ಗೌರವಿಸುತ್ತಿದ್ದಿದ್ದಕ್ಕೆ ಇಂತದ್ದೇ ಎನ್ನಬಹುದಾದ ಸೂಕ್ತ ಕಾರಣಗಳು ಸಿಗಲಾರವು. ದಕ್ಷಿಣ ಕನ್ನಡದವರಿಗೆ ಅವರು ನಮ್ಮ ಮಣ್ಣಿನ ಗಟ್ಟಿ ಬಂಟ ಎನ್ನುವ ಅಭಿಮಾನ. ಕನ್ನಡಪರ ಹೋರಾಟಗಾರರಿಗೆ ಅವರು ನೆಚ್ಚಿನ ಕನ್ನಡ ನಾಡು ನುಡಿ ನೆಲ ಜಲದ ಹೋರಾಟಗಾರ. ಇತ್ತೀಚೆಗೆ ಸುದ್ದಿ ವಾಹಿನಿಯೊಂದನ್ನು ಕೆಲ ಕಾಲ ನಡೆಸಿದ್ದರ ಕಾರಣ ಅವರು ಅರೆಕಾಲಿಕ ಅವಧಿಗೆ ಪತ್ರಕರ್ತರೂ ಆಗಿದ್ದರು. ನಮ್ಮ ಕಾಲದವರು ಈಗ ಮಧ್ಯವಯಸ್ಕರಾಗಿರುವವರಿಗೆ ಅವರು ಎವರ್ ಡಾನ್. ‘ಬಂಧನವಾಗದೇ ಇದ್ದಿದ್ದರೆ ಆ ಪಾಪಿ ದಾವೂದ್ ಇಬ್ರಾಹಿಂನನ್ನು ಮುತ್ತಪ್ಪ ಮುಗಿಸಿಬಿಡ್ತಿದ್ದರು’ ಎನ್ನುವ ಮಾತುಗಳನ್ನು ನಾವೇ ಅನೇಕ ಸಲ ಮಾತಾಡಿಕೊಂಡಿದ್ದೇವೆ. ಡಾನ್ ಜಯರಾಜ್ ಹತ್ಯೆ, ಬಿಲ್ಡರ್ ಸುಬ್ಬರಾಜ್ ಕೊಲೆ ಇವುಗಳಲ್ಲಿ ಮುತ್ತಪ್ಪ ರೈ ಕೈವಾಡ ಆಗಿನ ಅಪರಾಧ ಲೋಕದ ವರ್ತಮಾನದಲ್ಲಿ ರಾರಾಜಿಸಿದ್ದು ಈಗ ಇತಿಹಾಸ. ಅವರು ನಿಷಿದ್ಧ ಲೋಕ ಎಂದು ದೂರವಿಟ್ಟರು, ಅದೇ ನಿಷಿದ್ಧ ಲೋಕದ ಯಜಮಾನನಾಗಿ ಅವರನ್ನು ನೋಡುವ ಜನ ನಮ್ಮಲ್ಲಿದ್ದಾರೆ. ಒಳ್ಳೆಯದೋ ಕೆಟ್ಟದ್ದೋ ಅವರು ನಮ್ಮ ನಾಡಿನ ಸರ್ವಕಾಲಿಕ ಡಾನ್ ಅಷ್ಟೇ ವಿಚಾರ.
ಮುತ್ತಪ್ಪ ರೈಯವರ ಖ್ಯಾತಿ ಯಾವತ್ತಿಗೂ ಉತ್ತುಂಗದಲ್ಲೇ ಇತ್ತು. ಅವರ ಬಿಡದಿಯ ನಿವಾಸಕ್ಕೆ ಗಣ್ಯರು, ರಾಜಕಾರಣಿಗಳು ಸದಾ ಹೋಗಿ ಬರುತ್ತಿದ್ದರು. ಇತ್ತೀಚೆಗಷ್ಟೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸಹ ಹೋಗಿ ರೈಯವರ ಆರೋಗ್ಯ ವಿಚಾರಿಸಿದ್ದರು. ಮುತ್ತಪ್ಪ ರೈ ಇನ್ನಿಲ್ಲ ಎನ್ನುವ ಸುದ್ದಿಗಳು ನಿನ್ನೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಪಶ್ಚಿಮ ವಲಯದ ಡಿಸಿಪಿ ಶರಣಪ್ಪ ಖುದ್ದಾಗಿ ಸ್ಪಷ್ಟನೆ ಕೊಟ್ಟು ‘ಮುತ್ತಪ್ಪ ರೈ ಇನ್ನೂ ಬದುಕಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎನ್ನಬೇಕಾಯ್ತು. ಮುತ್ತಪ್ಪ ರೈ ಬದುಕುವುದು ಕಷ್ಟ ಎನ್ನುವ ಸಂಗತಿ ಅರಿವಿದ್ದರೂ ಅವರು ಪವಾಡ ನಡೆದು ಬದುಕಿಬಿಡಲಿ ಎಂದು ಆಶಿಸಿದವರೆಷ್ಟೋ, ಅವರು ಶೀಘ್ರ ಗುಣಮುಖರಾಗಲಿ ಎಂದು ಹರಸಿಕೊಂಡವರೆಷ್ಟೋ. ಇಲ್ಲೆಲ್ಲಾ ಮತ್ತದೇ ಪ್ರಶ್ನೆ ಕಾಡುತ್ತದೆ. ಅಸಲಿಗೆ ಯಾರು ಈ ಮುತ್ತಪ್ಪ ರೈ? ಯಾವುದೇ ನಿರ್ದಿಷ್ಟ ಕ್ಷೇತ್ರದಲ್ಲಿ ಹೆಸರು ಮಾಡದಿದ್ದರೂ ಅವರನ್ನು ಜನ ಯಾಕೆ ಗೌರವಿಸಿದರು? ಯಾಕೆ ಪ್ರೀತಿಸಿದರು?
ಮುತ್ತಪ್ಪ ರೈ ಹುಲಿಯಂತೆ ಬದುಕಿದರು. ಗಟ್ಟಿಯಾಗಿದ್ದ ಕಾಲದಲ್ಲಿ ಎಡಗೈ ಬಲಗೈ ಹಿಂದೆ ಮುಂದೆ ಅಂತಿದ್ದವರೆಲ್ಲ ಕಡೆಗಾಲದಲ್ಲಿ ಕೈ ಬಿಟ್ಟರು. ಅವರಿಂದ ಉಪಕೃತರಾದ ಅನೇಕರು ಕೃತಘ್ನರಾದರು. ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ಖುಷಿ ಖುಷಿಯಾಗಿಯೇ ಬದುಕು ಸವೆಸಿದರು ಮುತ್ತಪ್ಪ ರೈ. ಜೀವನ ಪ್ರೀತಿ ಮತ್ತು ಅಧಮ್ಯ ವಿಲ್ ಪವರ್ ಆಧಾರದಲ್ಲೇ ಜೀವಿಸಿದರು. ಬಂದೂಕು ಬಿಟ್ಟು ಹೊಸ ಬದುಕು ಕಟ್ಟಿಕೊಂಡರು. ಸಾಯುವ ಖಾತ್ರಿ ಇದ್ದರೂ ನಗುನಗುತ್ತಲೇ ನಡೆದರು. ಹೋಗಿ ಬನ್ನಿ ರೈಗಳೇ. ನಿಮಗೊಂದು ಆರ್ದ್ರ ಹೃದಯದಿಂದ ಶ್ರದ್ಧಾಂಜಲಿ. ನೀವು ಬದುಕಿನುದ್ದಕ್ಕೂ ನಂಬಿಕೊಂಡಿದ್ದ ಪುತ್ತೂರಿನ ಮಹತೋಬಾರ ಮಹಾಲಿಂಗೇಶ್ವರ ಸ್ವಾಮಿ ನಿಮ್ಮ ಪವಿತ್ರಾತ್ಮಕ್ಕೆ ಸದ್ಗತಿ ನೀಡಲಿ.
-ವಿಭಾ (ವಿಶ್ವಾಸ್ ಭಾರದ್ವಾಜ್)








