ಕಳೆದ 48 ಗಂಟೆಯಲ್ಲಿ 9 ಜೈಶ್ ಉಗ್ರರನ್ನ ಹೆಡಮುರಿ ಕಟ್ಟಿದ ಸೇನೆ…..
ಗುರುವಾರ ಮಧ್ಯರಾತ್ರಿ ಶ್ರೀನಗರದ ಪಂಥಾ ಚೌಕ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಇವರೆಲ್ಲರೂ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನೊಂದಿಗೆ ಸಂಬಂಧ ಹೊಂದಿದ್ದರು. ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಇವರಲ್ಲಿ 3 ಪೊಲೀಸರು ಮತ್ತು ಒಬ್ಬ ಸಿಆರ್‌ಪಿಎಫ್ ಜವಾನ ಸೇರಿದ್ದಾರೆ. ಕಳೆದ 48 ಗಂಟೆಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು 9 ಜೈಶ್ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ಐಜಿಪಿ ಕಾಶ್ಮೀರ ವಿಜಯ್ ಕುಮಾರ್ ಪ್ರಕಾರ, ಪಂಥಾ ಚೌಕ್ ಪ್ರದೇಶದಲ್ಲಿ ಹತನಾದ ಒಬ್ಬ ಭಯೋತ್ಪಾದಕನನ್ನು ಜೈಶ್-ಎ-ಮೊಹಮ್ಮದ್‌ನ ಸುಹೇಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 13 ರಂದು ಜೆವಾನ್ ಪ್ರದೇಶದಲ್ಲಿ ಪೊಲೀಸ್ ಬಸ್ ಮೇಲೆ ದಾಳಿ ನಡೆಸಲಾಗಿತ್ತು. ಆ ದಾಳಿಯಲ್ಲಿ ಈ ಉಗ್ರನೂ ಭಾಗಿಯಾಗಿದ್ದ. ಬಸ್ ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲ ಉಗ್ರರನ್ನು ಹತ್ಯೆ ಮಾಡಲಾಗಿದೆ.
2021ರಲ್ಲಿ 171 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಐಜಿಪಿ ಕುಮಾರ್ ಹೇಳಿದ್ದಾರೆ. ಇವರಲ್ಲಿ 19 ಪಾಕಿಸ್ತಾನಿ ಭಯೋತ್ಪಾದಕರು ಮತ್ತು 152 ಸ್ಥಳೀಯ ಭಯೋತ್ಪಾದಕರು ಸೇರಿದ್ದಾರೆ. ಕಳೆದ ವರ್ಷ 37 ಸ್ಥಳೀಯರು ಪ್ರಾಣ ಕಳೆದುಕೊಂಡಿದ್ದರೆ, ಈ ವರ್ಷ 34 ಸ್ಥಳೀಯರು ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ, ಕುಲ್ಗಾಮ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಇವರೆಲ್ಲರೂ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನೊಂದಿಗೆ ಸಂಬಂಧ ಹೊಂದಿದ್ದರು. ಇದುವರೆಗೆ 4 ಉಗ್ರರನ್ನು ಗುರುತಿಸಲಾಗಿದ್ದು, ಈ ಪೈಕಿ 2 ಪಾಕಿಸ್ತಾನಿ ಹಾಗೂ 2 ಸ್ಥಳೀಯರು.








