ಬೆಂಗಳೂರು : ಇಂದು ಮುಂಜಾನೆ ನಿಧನರಾದ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಅಂತಿಮ ವಿಧಿವಿಧಾನಗಳು ಬಿಡದಿಯಲ್ಲಿ ನಡೆಯಲಿದೆ. ಸದ್ಯ ಮಣಿಪಾಲ್ ಆಸ್ಪತ್ರೆಯಿಂದ ಮುತ್ತಪ್ಪ ರೈ ಅವರ ಪಾರ್ಥಿವ ಶರೀರವನ್ನು ಬಿಡದಿಯತ್ತ ರವಾನೆ ಮಾಡಲಾಗುತ್ತಿದೆ.

ಟೌನ್ ಮಾರ್ಗವಾಗಿ ಮೈಸೂರು ರೋಡ್ ಫ್ಲೈಓವರ್ ಮುಖಾಂತರ ಬಿಎಚ್ಇಎಲ್ ಸರ್ಕಲ್ ನಾಯಂಡಹಳ್ಳಿ, ಆರ್.ಆರ್ ನಗರ ಸರ್ಕಲ್, ಜ್ಞಾನಭಾರತಿ ಸರ್ಕಲ್, ಕೆಂಗೇರಿ ಕೃಷ್ಣಪ್ರಿಯ ಕನ್ವೆನ್ಷನ್ ಸೆಂಟರ್ ಸರ್ಕಲ್, ನೈಸ್ ರೋಡ್ ಜಂಕ್ಷನ್, ಕೆಂಗೇರಿ, ಕುಂಬಳಗೂಡು ಮಾರ್ಗವಾಗಿ ಬಿಡದಿಯ ನಿವಾಸಕ್ಕೆ ಮೆರವಣಿಗೆ ಮುಖಾಂತರ ಪಾರ್ಥಿವ ಶರೀರವನ್ನ ಕೊಂಡೊಯ್ಯಲಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ಮೂಲಗಳು ತಿಳಿಸಿವೆ.

ಇನ್ನು ರಸ್ತೆಯಲ್ಲಿ ಯಾವುದೇ ಜನಸಂದಣಿ ಆಗದಂತೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.ಸಂಘಟನೆಯ ಸಕಲ ಬಂಧು ಮಿತ್ರರು ಈಗಾಗಲೇ ತಿಳಿಸಿರುವಂತೆ ಆಯಾ ಸ್ಥಳದಲ್ಲಿ ಮುತ್ತಪ್ಪ ರೈ ಅಂತಿಮ ದರ್ಶನ ಪಡೆಯಬೇಕೆಂದು ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್ ಜಗದೀಶ್ ವಿನಂತಿಸಿದ್ದಾರೆ.








