ದಕ್ಷಿಣ ಕನ್ನಡದಲ್ಲಿ ಇಂದು 16 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಜಿಲ್ಲೆ ಬೆಚ್ಚಿಬಿದ್ದಿದೆ. ದುಬೈ ನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರ ಪೈಕಿ 15 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಫಸ್ಟ್ ನ್ಯೂರೋ ನಂಟು ಹೊಂದಿದ ಓರ್ವರಲ್ಲಿ ಕೂಡ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹಸಿರು ವಲಯವಾಗಿ ಗುರುತಿಸಲ್ಪಟ್ಟ ಉಡುಪಿ ಜಿಲ್ಲೆಗೆ ದುಬೈನಿಂದ ಆಗಮಿಸಿದ 5 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಮೇ. 12 ರಂದು ವಿಶೇಷ ವಿಮಾನದಲ್ಲಿ ಕರಾವಳಿಗೆ ಆಗಮಿಸಿದ 179 ಮಂದಿ ಪೈಕಿ ದಕ್ಷಿಣ ಕನ್ನಡ ಮೂಲದ 69 ಮಂದಿಯ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 15 ಮಂದಿಗೆ ಕೊರೊನಾ ತಗುಲಿರುವುದು ಖಚಿತವಾಗಿದೆ. ದ.ಕ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ದುಬೈನಿಂದ ಬಂದ ಕರಾವಳಿಗರನ್ನು ಮನೆಗೆ ತೆರಳಲು ಹಾಗೂ ಯಾರನ್ನು ಸಂಪರ್ಕಿಸಿಲು ಬಿಡದೆ, ಕ್ವಾರಂಟೈನ್ ಗೆ ಒಳಪಡಿಸಿತ್ತು. ಈ ಕ್ರಮದಿಂದಾಗಿ ಜಿಲ್ಲೆಯ ಜನರಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಇದೆ.
ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಪತ್ತೆಯಾದ ಕೊರೊನಾ ಸೋಂಕು ಪ್ರಕರಣಗಳು 50ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ 5 ಮಂದಿ ಬಲಿಯಾಗಿದ್ದಾರೆ.








