ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಇನ್ನೊಂದೆಡೆ ರಾಜ್ಯದ ಜನರಿಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ನೇರ ಹಣ ವರ್ಗಾವಣೆಗೆ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಮೂರನೇ ಪ್ಯಾಕೇಜ್ ಘೋಷಿಸಿದ ಅವರು ಮೆಕ್ಕೆ ಜೋಳ ಬೆಳೆವ ರೈತರಿಗೆ ತಲಾ 5 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಆಶಾ ಕಾರ್ಯಕರ್ತೆಯರಿಗೂ ತಲಾ 3 ಸಾವಿರ ರೂಪಾಯಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಲಾಕ್ ಡೌನ್ ಜಾರಿಯಿಂದಾಗಿ ಮೆಕ್ಕೆಜೋಳ ಬೆಳೆದ ಸುಮಾರು 10 ಲಕ್ಷ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.ಇದನ್ನು ಅರಿತು ನಮ್ಮ ಸರ್ಕಾರ ಪ್ರತಿಯೊಬ್ಬ ರೈತನಿಗೂ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದೆ. ಇದಕ್ಕಾಗಿ 500 ಕೋಟಿ ಪ್ಯಾಕೇಜ್ ಮೀಸಲಿಡಲಾಗುವುದು ಎಂದು ಹೇಳಿದರು. ಮೆಕ್ಕೆ ಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ 1,760 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ.
ಶೇ.40ರಿಂದ 50 ರಷ್ಟು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ. ಆದರೂ ಅವರ ಸಂಕಷ್ಟವನ್ನು ಅರಿತು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕೆಜೋಳ ಬೆಳೆದ ಬೆಳೆಗಾರರಿಗೆ ನೆರವು ನೀಡಿರುವುದು ನಮ್ಮ ಸರ್ಕಾರ ಎಂದರು.
ಆಶಾ ಕಾರ್ಯಕರ್ತೆಯರಿಗೆ 3 ಸಾವಿರ.
ಕೊರೊನಾ ವಿರುದ್ಧ ಹಗಲು , ರಾತ್ರಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಬಹು ದಿನಗಳ ಬೇಡಿಕೆಯಂತೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ರಾಜ್ಯದಲ್ಲಿ 40,250 ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ.ಒಂದೇ ಕಂತಿನಲ್ಲಿ ಸಹಕಾರ ಇಲಾಖೆ ಮೂಲಕ 3 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು . ಇದಕ್ಕಾಗಿ 12.50 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ನೈಸರ್ಗಿಕ ವಿಕೋಪ ಹಾಗೂ ಅಪಘಾತದಲ್ಲಿ ಕುರಿ, ಮೇಕೆಗಳು ಸಾವನ್ನಪ್ಪಿದರೆ 5 ಸಾವಿರ ರೂ. ನೆರವು ನೀಡುವ ಯೋಜನೆಯನ್ನು ಮುಂದುವರೆಸಲಾಗುವುದು ಎಂದು ಸಿಎಂ ತಿಳಿಸಿದ್ದು, ನಾನಾ ಕಾರಣಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಜನರ ಪರಿಸ್ಥಿತಿಯನ್ನು ಅರಿತು ಇದನ್ನು ಮುಂದುವರೆಸಲು ತೀರ್ಮಾನಿಸಿದ್ದೇವೆ . ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಹೊಸ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ ಎಂದು ಬಿಎಸ್ ವೈ ಸ್ಪಷ್ಟಪಡಿಸಿದರು.








