ಬೆಂಗಳೂರು : ಪಿಎಂ ಕೇರ್ ಗೆ ದೇಣಿಗೆ ನೀಡಿದ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಾ ಪತ್ರ ಬರೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದೇವೇಗೌಡ್ರು, “ಪ್ರಧಾನಮಂತ್ರಿ ನಿಧಿಗೆ ನಾನು ನೀಡಿದ ಕಾಣಿಕೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸಿರುವುದಾಗಿ ಪ್ರಧಾನಿಗಳು ಪತ್ರ ಮುಖೇನ ತಿಳಿಸಿದ್ದಾರೆ”.
“ಕೋವಿಡ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ಒಂದಾಗಬೇಕು. ನಾವೆಲ್ಲರೂ, ದೇಶದ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಪ್ರಯತ್ನಿಸೋಣ” ಎಂದು ಕರೆ ನೀಡಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು, ಪಿಎಂ ಕೇರ್, ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು, ತಮ್ಮ ಪೆನ್ಸನ್ ಹಣದ ಮೂಲಕ ನೀಡಿದ್ದರು.
ಪ್ರಧಾನಿ ಪತ್ರದಲ್ಲಿ
“ನೀವು ನೀಡಿದ ದೇಣಿಗೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿದೆ. ತಾಳ್ಮೆ, ಶಿಸ್ತು, ಎಚ್ಚರಿಕೆಯ ಮೂಲಕ, ಕೋವಿಡ್ ವಿರುದ್ದದ ಹೋರಾಟದಲ್ಲಿ ಗೆಲುವು ಸಾಧಿಸೋಣ”ಎಂದು ಪ್ರಧಾನಿಗಳ ಪ್ರಶಂಸಾ ಪತ್ರದಲ್ಲಿ ಬರೆಯಲಾಗಿದೆ.
ಇನ್ನು ಕಳೆದ ತಿಂಗಳು ಪ್ರಧಾನಿ ಮೋದಿ, ಜೆಡಿಎಸ್ ವರಿಷ್ಠ ದೇವೇಗೌಡರಿಗೆ ದೂರವಾಣಿ ಕರೆಮಾಡಿ, ಕೋವಿಡ್ ವಿರುದ್ಧದ ಹೋರಾಟಕ್ಕೆ ಸಲಹೆಯನ್ನು ಪಡೆದಿದ್ದರು.







