ಬೆಂಗಳೂರು : ಕೊರೊನಾ ಸೋಂಕು ಸುಲಭದಲ್ಲಿ ನಿರ್ಮೂಲನೆ ಆಗಲಾರದು ಎಂದು ನಿನ್ನೆ ವಿಶ್ವಸಂಸ್ಥೆ ಸಹ ಖಚಿತ ಪಡಿಸಿದೆ. ಹೀಗಾಗಿ ನಾವು ಇದರ ಜೊತೆಗೆ ಬದುಕುವುದನ್ನು ಕಲಿಯಬೇಕು ಸಚಿವ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆ ಅದ ಮೇಲೆ ಇದೀಗ ನಾಲ್ಕನೇ ಹಂತದ ಲಾಕ್ ಡೌನ್‌ಗೆ ಹೋಗುತ್ತಿದ್ದೇವೆ. ಎಲ್ಲಾ ಕಡೆಯಿಂದ ನಾವು ನಮ್ಮ ರಾಜ್ಯದವರನ್ನು ರಾಜ್ಯಕ್ಕೆ ಕರೆತರುತ್ತಿದ್ದೇವೆ. ಸೋಂಕು ಹೆಚ್ಚಿರುವ ದೇಶದಿಂದಲೂ ಭಾರತೀಯರು ಬಂದಿದ್ದಾರೆ. ಇವರ ಮೂಲಕ ಸೋಂಕು ಹರಡದಂತೆ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಇನ್ನು ಸೋಂಕಿತರ ಚಿಕಿತ್ಸೆಗಾಗಿ ಒಂದು ಲಕ್ಷ ಹಾಸಿಗೆ ವ್ಯವಸ್ಥೆ ರಾಜ್ಯದಲ್ಲಿ ಮಾಡಿಕೊಳ್ಳಲಾಗಿದೆ. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1000ಕ್ಕೆ ಏರಿದೆ. ಬೇರೆ ರಾಷ್ಟ್ರ, ರಾಜ್ಯಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಇದುವರೆಗೂ ಕೇರಳ ಸರ್ಕಾರ 30 ಸಾವಿರ ಟೆಸ್ಟ್ ಮಾಡಿದೆ. ನಮ್ಮಲ್ಲಿ ಅದಕ್ಕಿಂತ ಹೆಚ್ಚು ಪರೀಕ್ಷೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಸೋಂಕು ನಿಯಂತ್ರಣ ಮಾಡುವಲ್ಲಿ ಮುಂದಿದೆ ಎಂದು ಸುಧಾಕರ್ ಹೇಳಿದರು.








