ಸರ್ಕಾರ ನೀಡಿದ ಕೋವಿಡ್ ಪರಿಹಾರ ಚೆಕ್ ನಲ್ಲಿ ಸಮಸ್ಯೆ Saaksha tv
ನೆಲಮಂಗಲ : ದೇಶದಲ್ಲಿ ಕೊರೊನಾ ಮಹಾಮಾರಿ ಒಕ್ಕರಿಸಿದಾಗ ಜನತೆ ಸಾಕಷ್ಟು ತೊಂದರೆಗೆ ಒಳಪಟ್ಟರು. ಈಗಲು ಅನೇಕರು ಕೊರೊನಾದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗಾಗಲೆ ಡೆಡ್ಲಿ ವೈರಸ್ ಗೆ ಅನೇಕರು ಜೀವ ಕಳೆದುಕೊಂಡಿದ್ದಾರೆ.ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಇನ್ನೂ ಅನೇಕರು ಕುಟುಂಬಸ್ಥರನ್ನು ಕಳೆದುಕೊಂಡು ನೋವಲ್ಲಿ ಮುಳಿಗಿದ್ದಾರೆ.
ಇದೀಗ ಸರ್ಕಾರ ಕೊರೊನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ರೂಪದಲ್ಲಿ ಒಂದು ಲಕ್ಷ ರೂ.ಗಳನ್ನ ಬಿಡುಗಡೆ ಮಾಡಿದೆ. ಆದರೆ ಪರಿಹಾರ ಹಣದ ಚೆಕ್‍ನಲ್ಲಿ ಸಮಸ್ಯೆ ಆಗಿರುವ ಆರೋಪ ಕೇಳಿ ಬಂದಿದೆ. ಸರಕಾರ ನೀಡಿದ ಚೆಕ್ ಅಸಲಿಯೋ ನಕಲಿಯೋ ಎಂಬ ಅನುಮಾನ ಜನರಲ್ಲಿ ಮೂಡಿದೆ.
ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ನಿವಾಸಿ ನಾಗಮ್ಮ ಎಂಬಾಕೆ ಕೊರೊನಾದಿಂದ ಮೃತಪಟ್ಟಿದ್ದರು. ಇವರ ಪತಿ ರಂಗಸ್ವಾಮಿ ಹೆಸರಿಗೆ ಸರಕಾರ 1 ಲಕ್ಷ ರೂ. ಚೆಕ್ ನೀಡಿದೆ. ಚೆಕ್ ಪಡೆದು ಬ್ಯಾಂಕಿನಲ್ಲಿ ವಿಚಾರಿಸಿದರೆ ಹಣವಿಲ್ಲ ಎಂದು ವಾಪಸ್ ಕಳಿಸಿದ್ದು, ನಂತರ ಕಚೇರಿಗೂ ಬ್ಯಾಂಕಿಗೂ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ರಂಗಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರಕಾರ ಆದಷ್ಟು ಬೇಗ ಇದನ್ನು ಪರಿಹರಿಸಬೇಕಾಗಿದೆ.