ಹೊಸದಿಲ್ಲಿ, ಮೇ 14: ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಸಂಬಳದ ಶೇಕಡಾ 30ರಷ್ಟನ್ನು ಒಂದು ವರ್ಷಗಳ ಕಾಲ ತ್ಯಜಿಸಲು ತೀರ್ಮಾನ ಮಾಡಿದ್ದಾರೆ. ರಾಷ್ಟ್ರಪತಿ ಭವನದ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಲು ತೀರ್ಮಾನಿಸಿರುವ ರಾಷ್ಟ್ರಪತಿಗಳು, ತಮ್ಮ ದೇಶಿ ಪ್ರವಾಸ ಮತ್ತು ಕಾರ್ಯಕ್ರಮಗಳನ್ನು ಸಹ ಕಡಿಮೆ ಮಾಡಿದ್ದಾರೆ ಎಂಬುದಾಗಿ ರಾಷ್ಟ್ರಪತಿ ಭವನ ತಿಳಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಒಂದು ತಿಂಗಳ ಸಂಬಳವನ್ನು ಪಿಎಂ ಕೇರ್ ನಿಧಿಗೆ ನೀಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಇದೀಗ ಒಂದು ವರ್ಷದ ಅವಧಿಗೆ ಶೇ.30ರಷ್ಟು ಸಂಬಳವನ್ನು ತ್ಯಜಿಸಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಅಷ್ಟೇ ಅಲ್ಲ ಸಮಾರಂಭಗಳ ಸಂದರ್ಭದಲ್ಲಿ ಬಳಸಲು ಬೇಕಾದ ಅಧ್ಯಕ್ಷೀಯ ಲಿಮೋಸಿನ್ ಕಾರಿನ ಖರೀದಿಯನ್ನು ಕೂಡಾ ಮುಂದೂಡಿದ್ದಾರೆ. ಅಂತಹ ಸನ್ನಿವೇಶದಲ್ಲಿ ರಾಷ್ಟ್ರಪತಿ ಭವನ ಮತ್ತು ಸರ್ಕಾರದ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುವುದು ಎಂದು ರಾಷ್ಟ್ರಪತಿ ಭವನ ತಿಳಿಸಿದೆ.








