ಅಮಿತ್ ಶಾ ಕಠಿಣ ನಿಲುವು – ಪ್ರಧಾನಿ ಭದ್ರತೆ ಲೋಪ ಸಹಿಸಲಾಗುವುದಿಲ್ಲ..
ಬುಧವಾರ ಪಂಜಾಬ್ನ ಫಿರೋಜ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ರದ್ದುಗೊಂಡ ನಂತರ, ಕೇಂದ್ರ ಸರ್ಕಾರ ಮತ್ತು ಪಂಜಾಬ್ನ ಕಾಂಗ್ರೆಸ್ ಸರ್ಕಾರದ ನಡುವಿನ ಹಗ್ಗಜಗ್ಗಾಟ ಹೆಚ್ಚುತ್ತಿದೆ. ಪ್ರಧಾನಿ ಮೋದಿಯವರ ರ್ಯಾಲಿಯನ್ನು ರದ್ದುಗೊಳಿಸಲು ಭದ್ರತಾ ಲೋಪವೇ ಕಾರಣ ಎಂದು ಹೇಳಲಾಗಿದೆ, ಆದರೆ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಯಾವುದೇ ಲೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.
ಮತ್ತೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸಂಪೂರ್ಣ ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜಾಬ್ನಲ್ಲಿ ಪ್ರಧಾನಿಯವರ ಭದ್ರತೆಯ ಲೋಪ ಕುರಿತು ಗೃಹ ಸಚಿವಾಲಯವು ವಿವರವಾದ ವರದಿಯನ್ನು ಕೇಳಿದೆ ಎಂದು ಶಾ ಹೇಳಿದ್ದಾರೆ. ಪ್ರಧಾನಿ ಭೇಟಿ ವೇಳೆ ಭದ್ರತೆಯಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುವುದು.
ಮುಂದುವರೆದು “ಪಂಜಾಬ್ನಲ್ಲಿ ಕಾಂಗ್ರೆಸ್ ಪ್ರಾಯೋಜಿಸಿದ ಈ ಘಟನೆಯು ಅದು ಹೇಗೆ ಯೋಚಿಸುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ ಎಂಬುದರ ಟ್ರೇಲರ್ ಆಗಿದೆ” ಎಂದು ಅವರು ಹೇಳಿದರು. “ಪದೇ ಪದೇ ಜನರಿಂದ ತಿರಸ್ಕೃತಗೊಂಡು ಕಾಂಗ್ರೆಸ್ ಹುಚ್ಚು ಹಿಡಿದಿದೆ. ಕಾಂಗ್ರೆಸ್ ನಾಯಕರು ತಮ್ಮ ಕೃತ್ಯಕ್ಕೆ ಇಡೀ ದೇಶದ ಕ್ಷಮೆ ಯಾಚಿಸಬೇಕು.” ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಟಿಂಡಾದ ಭಿಸಿಯಾನ ವಾಯುನೆಲೆಗೆ ಬಂದಿಳಿದರು. ಇದಕ್ಕೂ ಮುನ್ನ ಇಲ್ಲಿಂದ ಹೆಲಿಕಾಪ್ಟರ್ನಲ್ಲಿ ಫಿರೋಜ್ಪುರಕ್ಕೆ ಹೋಗಬೇಕಿತ್ತು, ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ನಲ್ಲಿ ಹಾರಾಟ ನಡೆಸಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪಿನ (ಎಸ್ಪಿಜಿ) ಅಧಿಕಾರಿಗಳು ಪಂಜಾಬ್ ಪೊಲೀಸರೊಂದಿಗೆ ಚರ್ಚಿಸಿ ಪೊಲೀಸರ ಸಲಹೆಯಂತೆ ಪ್ರಧಾನಿ ಬೆಂಗಾವಲು ಪಡೆ ರಸ್ತೆ ಮಾರ್ಗವಾಗಿ ಫಿರೋಜ್ಪುರಕ್ಕೆ ತೆರಳಿತು.
ಫಿರೋಜ್ಪುರ ಜಿಲ್ಲೆಯ ಮುಡ್ಕಿ ಬಳಿ ರಸ್ತೆಯಲ್ಲಿ ಕುಳಿತ ಪ್ರತಿಭಟನಾಕಾರರ ಬಗ್ಗೆ ಮಾಹಿತಿ ಪಡೆದ ನಂತರ, ಪ್ರಧಾನಿ ಬೆಂಗಾವಲು ಪಡೆ 10 ಕಿಲೋಮೀಟರ್ ಹಿಂದೆ ನಿಲ್ಲಿಸಿತು. ಸುಮಾರು 20 ನಿಮಿಷಗಳ ಕಾಲ ಕಾದ ನಂತರ ಪ್ರಧಾನಿ ಮೋದಿ ರ್ಯಾಲಿಯನ್ನು ರದ್ದುಗೊಳಿಸಿ ಬಟಿಂಡಾಗೆ ತೆರಳಿದರು.








