ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣ ಲೂಟಿ ಮಾಡಿದ ಬಿ ನಾಗೇಂದ್ರ ರಾಜೀನಾಮೆಗೆ ಪಟ್ಟು. ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಕೆ!
ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಸರ್ಕಾರವಲ್ಲ, ಇದು ಡಿ.ಕೆ. ಶಿವಕುಮಾರ್ ಅವರ ಗೂಂಡಾಗಿರಿ ಸರ್ಕಾರ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂಪಾಯಿ ಲೂಟಿ ಮಾಡಿರುವ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡುವವರೆಗೂ ಶಾಸನಸಭೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಸದನದಲ್ಲಿ ಪ್ರತಿಯೊಂದು ವಿಷಯಕ್ಕೂ ಮುಖ್ಯಮಂತ್ರಿಗಳೇ ಉತ್ತರ ಕೊಡುವುದಾದರೆ ಉಳಿದ ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಜನರ ತೆರಿಗೆ ಹಣದಲ್ಲಿ ಕಾರು, ಮನೆ ಪಡೆಯುವ ಸಚಿವರಿಗೆ ಜವಾಬ್ದಾರಿ ಬೇಡವೇ? ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಗೌರವ ನೀಡುವುದಾದರೆ ಸಚಿವರಿಗೆ ತಮ್ಮ ಅಧಿಕಾರದ ಅರಿವಿರಬೇಕು. ಸಿಎಂ ಒಬ್ಬರೇ ಉತ್ತರ ನೀಡುವುದಾದರೆ ಎಲ್ಲ ಸಚಿವರನ್ನು ಅಧಿವೇಶನದಿಂದ ಹೊರಗೆ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
31 ಪ್ರಕರಣ ಎದುರಿಸುತ್ತಿರುವ ಸಚಿವ ವಿಧಾನಸೌಧಕ್ಕೆ ಯಾವಾಗ ಬರ್ತಾರೆ?
ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಸಿಬಿಐ, ಲೋಕಾಯುಕ್ತ, ಎಸ್ಐಟಿ ಹಾಗೂ ಸಿಐಡಿ ಸೇರಿ ಒಟ್ಟು 31 ಪ್ರಕರಣಗಳು ವಿಚಾರಣೆಯಲ್ಲಂತಿವೆ. ಅವರು ದಿನವೂ ಕೋರ್ಟ್ಗೆ ಅಲೆಯಬೇಕಾದ ಪರಿಸ್ಥಿತಿಯಿದೆ. ಹೀಗಿರುವಾಗ ಅವರು ಇಲಾಖೆಯ ಕೆಲಸಗಳನ್ನು ಯಾವಾಗ ಮಾಡುತ್ತಾರೆ ಮತ್ತು ವಿಧಾನಸೌಧಕ್ಕೆ ಯಾವಾಗ ಬರುತ್ತಾರೆ? ದಲಿತರ 89 ಕೋಟಿ ರೂಪಾಯಿ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದನ್ನು ಸ್ವತಃ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಇಡೀ ಸಂಪುಟವೇ ಕಳಂಕಿತವಾಗುತ್ತದೆ. ನಾಗೇಂದ್ರ ಅವರು ಸಿಎಂ ಹಾಗೂ ಹೈಕಮಾಂಡ್ಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ವಿಧಾನಪರಿಷತ್ ಸಭಾಪತಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ ರಾಜೀನಾಮೆ ಪಡೆಯಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಸಭಾಪತಿ ಹುದ್ದೆಯನ್ನು ಮಾತ್ರವಲ್ಲ, ಸಿಎಂ ಅಧಿಕಾರವನ್ನೂ ಒದ್ದು ಕಿತ್ತುಕೊಂಡಿದ್ದಾರೆ ಎಂದು ಚಾಟಿ ಬೀಸಿದರು.
ಸ್ವಚ್ಛ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್ನಿಂದ ಹೊಸ ದರೋಡೆ!
ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ, ಬದಲಿಗೆ ಸ್ವಚ್ಛ ಬೆಂಗಳೂರು ಹೆಸರಿನಲ್ಲಿ ಜನರಿಂದ ಹೊಸ ತೆರಿಗೆ ವಸೂಲಿ ಮಾಡಿ ಲೂಟಿ ಮಾಡಲಾಗುತ್ತಿದೆ. ಸಚಿವ ಕೃಷ್ಣ ಭೈರೇಗೌಡ ರೀಲ್ಸ್ ಮಾಡಿಕೊಂಡು ತೆರಿಗೆ ಹಾಕುತ್ತಿದ್ದಾರೆ. ಮನೆ ತೆರಿಗೆಯಲ್ಲಿ ಕಸದ ಶುಲ್ಕ ಸೇರಿದ್ದರೂ, ಈಗ ಫ್ಲ್ಯಾಟ್ಗಳ ಕಸದ ಶುಲ್ಕವನ್ನು 40 ರೂಪಾಯಿಯಿಂದ 400 ರೂಪಾಯಿಗೆ ಏರಿಸಲಾಗಿದೆ. ನಗರದ 7 ಕಿಲೋಮೀಟರ್ ರಸ್ತೆಯಲ್ಲಿ 300 ಗುಂಡಿಗಳಿವೆ. ಆದರೆ ಸರ್ಕಾರ ಕಸದಿಂದ ಸ್ವಾತಂತ್ರ್ಯ ಎಂದು ಹೇಳಿಕೊಂಡು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕಿಡಿಕಾರಿದರು.
ಅಧಿವೇಶನದ ಒಳಗೂ ಹೊರಗೂ ಬಿಜೆಪಿ ಹೋರಾಟ!
ವಾಲ್ಮೀಕಿ ಹಗರಣ, ಬಿಡದಿ ಟೌನ್ಶಿಪ್ ಹಾಗೂ ಕೆಪಿಎಸ್ಸಿ ಅಕ್ರಮಗಳ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ರೂಪಿಸಿದೆ. ಪ್ರತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ವಿಧಾನಸಭೆಯ ಅಧಿವೇಶನದ ಒಳಗೂ ಮತ್ತು ಹೊರಗೂ ಸರ್ಕಾರದ ಆಡಳಿತ ಯಂತ್ರ ಹಾಗೂ ಲೂಟಿಕೋರರ ವಿರುದ್ಧ ಬಿಜೆಪಿ ಸತತ ಹೋರಾಟ ನಡೆಸಲಿದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.








