ಕೊನೆಗೂ ಮಕ್ಕಳಿಂದ ಮರಳಿ ಆಸ್ತಿ ಪಡೆದ ವೃದ್ಧ ತಾಯಿ !
ಹಾವೇರಿ: ಆಗಾಗ ಮಕ್ಕಳು ತಂದೆ-ತಾಯಿಯ ಆಸ್ತಿಯನ್ನು ಕಬಳಿಸಿಕೊಂಡು ಅವರನ್ನೆ ಮನೆಯಿಂದ ಹೊರಕಿದ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಇಂತಹದ್ದೇ ಘಟನೆಯು ಜಿಲ್ಲೆಯ ಹಾನಗಲ್ ತಾಲುಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ. ಆದರೆ ತಾಯಿಯು ಮಕ್ಕಳು ಕಬಳಿಸಿದ ಆಸ್ತಿಯನ್ನು ಮರಳಿ ಪಡೆದಿದ್ದಾರೆ.
76 ವರ್ಷದ ವೃದ್ಧ ತಾಯಿ ಪ್ರೇಮವ್ವ ಹವಳಣ್ಣನವರು ಪತಿ ಶ್ರೀಕಾಂತ ನಿಧನರಾಗಿದ್ದಾರೆ. ತಂದೆಯ ನಿಧನದ ನಂತರ ಇಬ್ಬರು ಗಂಡು ಮಕ್ಕಳಾದ ಧನಿಕುಮಾರ ಮತ್ತು ಸಂತೋಷ 3 ಎಕರೆ 32 ಗುಂಟೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅಲ್ಲದೆ ಗ್ರಾಮದಲ್ಲಿದ್ದ ಎರಡೂ ಮನೆಗಳನ್ನ ತಮ್ಮ ಹೆಸರಿಗೆ ಮಾಡಿಕೊಂಡು ಹೆತ್ತ ತಾಯಿಗೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದರು.
ಇವರು ಒಂದೂವರೆ ವರ್ಷದಿಂದ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಾಸವಾಗಿದ್ದರು. ಸಾಂತ್ವನ ಕೇಂದ್ರದ ನೆರವಿನಿಂದ ಸವಣೂರು ಉಪವಿಭಾಗಾಧಿಕಾರಿಗೆ ಆಸ್ತಿ ಬಿಡಿಸಿಕೊಡುವಂತೆ ಪ್ರೇಮವ್ವ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಉಪವಿಭಾಗಧಿಕಾರಿ ಮಕ್ಕಳಿಂದ ತಾಯಿಯ ಹೆಸರಿಗೆ ಜಮೀನು ಮತ್ತು ಮನೆಯನ್ನ ಬಿಡಿಸಿಕೊಟ್ಟಿದ್ದಾರೆ. ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ರಿಂದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸಮ್ಮುಖದಲ್ಲಿ ಪ್ರೇಮವ್ವಳಿಗೆ ಮನೆ ಹಾಗೂ ಜಮೀನಿನ ದಾಖಲೆಗಳನ್ನ ನೀಡಲಾಯಿತು. ಈ ವೇಳೆ ಮಕ್ಕಳ ಕಿರುಕುಳ ನೆನೆದು ತಾಯಿ ಕಣ್ಣೀರು ಹಾಕಿ, ಆಸ್ತಿಮರಳಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.