ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಖಾಲಿ ನಿವೇಶನಗಳ ಹರಾಜು ಪ್ರಕ್ರಿಯೆ ಹಾಗೂ ಸಕ್ರಮ-ಅಕ್ರಮ ವಿಚಾರವಾಗಿ ಇಬ್ಬರು ಸಚಿವರ ನಡುವೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ಮಾತಿನ ಚಕಮಕಿ ನಡೆದಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ನಗರಾಭಿವೃದ್ಧಿ ಸಚಿವ ವಿ.ಸೋಮಣ್ಣ ನಡುವೆ ಪರಸ್ಪರ ಏಕವಚನದ ಬೈಗುಳ ನಡೆದಿದೆ.
ನಡೆದದ್ದೇನು?
ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಬೆಂಗಳೂರು ಮಹಾನಗರದಲ್ಲಿ ಬಿಡಿಎ ಕಾಯ್ದೆ ಉಲ್ಲಂಘನೆ ಮಾಡಿ ಮನೆ ಕಟ್ಟಿಕೊಂಡಿರುವವರಿಗೆ ದಂಡ ಕಟ್ಟಿಸಿಕೊಂಡು ಕಾನೂನುಬದ್ಧ ಮಾಡುವ ವಿಷಯದಲ್ಲೇ ಸಚಿವರ ಕಿತ್ತಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಹರಾಜು ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ಮಾಧುಸ್ವಾಮಿ ಮೊದಲು ದನಿ ಎತ್ತಿದರು. ಈ ವೇಳೆ ಸೋಮಣ್ಣ, ಬೆಂಗಳೂರಿಗೆ ಸಂಬಂಧಿಸಿದವರು ಮಾತ್ರ ಮಾತನಾಡಿ ಎಂದು ಸೈಲೆಂಟಾದ್ರು. ಈ ಮಾತಿಗೆ ಕೆರಳಿ ಕೆಂಡವಾದ ಮಾಧುಸ್ವಾಮಿ, ಏರು ದನಿಯಲ್ಲಿ ಬೆಂಗಳೂರು ಎಲ್ಲರಿಗೂ ಸೇರಿದ್ದು. ಬೆಂಗಳೂರಿನ ಬಗ್ಗೆ ಮಾತನಾಡಲು ನಮಗೂ ಹಕ್ಕಿದೆ. ಇದು ಯಾರೊಬ್ಬರ ಸ್ವತ್ತಲ್ಲ ಎಂದು ಗುಡುಗಿದರು. ಅವರ ಮಾತಿಗೆ ಇಡೀ ಸಭೆಯೇ ಒಂದು ಕ್ಷಣ ಸೈಲೆಂಟ್ ಆಯ್ತು.
ಬಳಿಕ ಮಧ್ಯಪ್ರವೇಶಿಸಿದ ಸಿಎಂ ಯಡಿಯೂರಪ್ಪ, ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವೇ ಹೀಗೆ ಕಿತ್ತಾಡಿಕೊಂಡರೆ ಹೇಗೆ ಎಂದು ಸಮಾಧಾನಪಡಿಸಿದ್ದಾರೆ.








