ನವದೆಹಲಿ : ಕೊರೊನಾ ಹೆಮ್ಮಾರಿಯಿಂದಾಗಿ ತತ್ತರಿಸಿರುವ ಭಾರತದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವಂತಹ ನಿಟ್ಟಿನಲ್ಲಿ ಪ್ರಧಾನಿ ಮೋದಿ, 20 ಲಕ್ಷ ಕೋಟಿಗಳ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಆರ್ಥಿಕ ಪ್ಯಾಕೇಜ್ ಕುರಿತು ಅವರು ಮರು ಪರಿಶೀಲನೆ ನಡೆಸಿ ಜನರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ದೇಶದಲ್ಲಿರುವ ಜನರಿಗೆ ಇಂದು ಹಣದ ಅಗತ್ಯತೆ ಹೆಚ್ಚಾಗಿದೆ. ಪ್ರಧಾನಿ ಮೋದಿಯವರು ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್’ನ್ನು ಮರು ಪರಿಶೀಲನೆ ನಡೆಸಬೇಕಿದೆ. ಜನರ ಖಾತೆಗಳಿಗೆ ಕೇಂದ್ರ ಸರ್ಕಾರ ಹಣವನ್ನು ನೇರವಾಗಿ ವರ್ಗಾವಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.
‘ಇಂದು ಬಡವರಿಗೆ ಹಣದ ಅಗತ್ಯ ಇದೆ. ಹಾಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವರಿಗೆ 200 ದಿನಗಳ ಕೆಲಸವನ್ನು ನೀಡಬೇಕು ಎಂದು ಒತ್ತಾಯಿಸಿದ ರಾಹುಲ್ ಗಾಂಧಿ ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಲದ ಅಗತ್ಯವಿಲ್ಲ. ಮಕ್ಕಳು ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ. ಬದಲಾಗಿ ಸಂಕಷ್ಟಕ್ಕೆ ನೆರವಾಗುತ್ತಾಳೆ. ಹಾಗೆಯೇ ಕೇಂದ್ರ ಕೂಡ ಜನರ ಜೇಬಿಗೇ ಹಣ ತಲುಪುವಂತೆ ಮಾಡಬೇಕಿದೆ. ಮಕ್ಕಳಿಗೆ ತಿನ್ನಲು ಆಹಾರ ದೊರಕಲು ತಾಯಿ ಏನೂ ಬೇಕಾದರೂ ಮಾಡುತ್ತಾರೆ. ಅದೇ ರೀತಿ ಸರ್ಕಾರ ಕೂಡ ಜನರ ಖಾತೆಗಳಿಗೆ ಹಣವನ್ನು ಜಮೆ ಮಾಡಬೇಕು. ಇದನ್ನು ಮಾಡದಿದ್ದರೆ, ದುರಂತ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ತಿಳಿಸಿದ್ದಾರೆ.








