ಕೊರೊನಾ ಕೇಸ್ ಎಷ್ಟು.. ಐಪಿಎಲ್ ಆಡಲ್ವಂತೆ ಆ ಆಟಗಾರರು.. ಓದಿ ಇಂದಿನ ಟಾಪ್ ಫೈವ್ ಸುದ್ದಿ
ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಇಂದು 28,723 ಕೊರೊನಾ ಕೇಸ್ ಪತ್ತೆಯಾಗಿವೆ. ಇಂದು ಎಂಟು ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ. 3,105 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸಕ್ರಿಯ ಕೇಸ್ ಗಳ ಸಂಖ್ಯೆ 1,41,337 ಕ್ಕೆ ಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 20,121 ಕೊರೊನಾ ಕೇಸ್ ಪತ್ತೆಯಾಗಿವೆ. ಇಂದು ನಗರದ ದಕ್ಷಿಣ ವಲಯದಲ್ಲಿ ಅತಿ ಕೇಸ್ ಗಳು ಪತ್ತೆಯಾಗಿವೆ. ಇಲ್ಲಿ 3,172 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಬೊಮ್ಮನಹಳ್ಳಿ ವಲಯದಲ್ಲಿ 2,232 , ದಾಸರಹಳ್ಳಿ 493, ಬೆಂಗಳೂರು ಪೂರ್ವ 3,126 , ಮಹದೇವಪುರ 2,343, ಆರ್ ಆರ್‌ನಗರ 1,528, ಪಶ್ಚಿಮ 2,454, ಯಲಹಂಕ 1,412, ಅನೇಕಲ್ 921, ಬೆಂಗಳೂರು ಹೊರವಲಯ 1,360 ಸೇರಿ ಒಟ್ಟು 20,121 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಭಾರತದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಹವಾ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,64,202 ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಅವಧಿಯಲ್ಲಿ ಕೊರೊನಾ ಸೋಂಕಿಗೆ 315 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಿನ್ನೆ ಒಂದು ದಿನದಲ್ಲಿ 1,09,345 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂಗ್ಲೆಂಡ್ ಆಟಗಾರರು ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಲು ಐಪಿಎಲ್ ಕಾರಣವಾಗುತ್ತಿದೆಯಂತೆ. ಹೀಗಂತ ಟೀಮ್ ಇಂಡಿಯಾ ವಿರುದ್ಧ ತವರಿನಲ್ಲಿ ಇಂಗ್ಲೆಂಡ್ ಸರಣಿ ಸೋತ ಬಳಿಕ ಹಾಗೂ ಆಸ್ಟ್ರೇಲಿಯಾದಲ್ಲಿ ಹೀನಾಯವಾಗಿ ಆ್ಯಶಸ್ ಸರಣಿ ಕಳೆದುಕೊಂಡ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಅಂದುಕೊಂಡಿದೆ. ಹೀಗಾಗಿ ECB ಇದೀಗ ತನ್ನ ಆಟಗಾರರಿಗೆ ಲಗಾಮು ಹಾಕಲು ಸಿದ್ಧತೆ ನಡೆಸಿದೆ. IPL 2022 ರಲ್ಲಿ ಇಂಗ್ಲೆಂಡ್ ಆಟಗಾರರನ್ನು ನಿರ್ಬಂಧಿಸಲು ಯೋಚನೆ ಮಾಡುತ್ತಿದೆ.
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕೊರೋನಾ ಕಾಣಿಸಿಕೊಂಡಿದೆ. 7 ಭಾರತೀಯ ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ತಿಳಿಸಿದೆ. ಎಲ್ಲಾ ಸೋಂಕಿತ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸೊಂಕಿತರನ್ನು ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಾಕರ್, ತ್ರಿಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾ ಎಂದು ಹೇಳಲಾಗುತ್ತಿದೆ.









