ಬ್ರಿಟನ್, ಮೇ 17: ಇಂಗ್ಲೆಂಡ್‌ನ ಕೌಂಟಿ ಡರ್ಹಾಮ್‌ನ ಬಿಷಪ್ ಆಕ್ಲೆಂಡ್‌ನ ಸ್ಟೇಷನ್ ವ್ಯೂ ವೈದ್ಯಕೀಯ ಕೇಂದ್ರದಲ್ಲಿ ಜೆನರಲ್ ಪ್ರ್ಯಾಕ್ಟೀಷನರ್ ಆಗಿ ಕೆಲಸ ಮಾಡುತ್ತಿದ್ದ ದೆಹಲಿಯ 55 ವರ್ಷದ ಕೇರಳ ಮೂಲದ ಡಾ.ಪೂರ್ಣಿಮಾ ನಾಯರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೋನಾ ಸೋಂಕಿನ ವಿರುದ್ಧ ಹೋರಾಡಿದ ಅವರು ಸ್ಟಾಕ್ಟನ್-ಆನ್-ಟೀಸ್‌ನ ನಾರ್ತ್ ಟೀಸ್ ಆಸ್ಪತ್ರೆಯ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಇಂಗ್ಲೆಂಡ್ ನಲ್ಲಿ ಈಗಾಗಲೇ ಕೊರೊನಾ ಸೋಂಕು 32,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ.
ನಮ್ಮ ರೋಗಿಗಳಿಗೆ ಹೆಚ್ಚು ಪ್ರೀತಿಪಾತ್ರರಾಗಿದ್ದ ಮತ್ತು ಮೌಲ್ಯಯುತ ಸಹೋದ್ಯೋಗಿ ಹಾಗೂ ಸ್ನೇಹಿತೆ ಡಾ.ಪೂರ್ಣಿಮಾ ನಾಯರ್ ಅವರ ಮರಣವನ್ನು ಘೋಷಿಸಲು ತುಂಬಾ ವಿಷಾದವಾಗುತ್ತದೆ ಎಂದು ವೈದ್ಯಕೀಯ ಕೇಂದ್ರವು ಸಂದೇಶದಲ್ಲಿ ತಿಳಿಸಿದೆ.
ಡಾ. ನಾಯರ್ ಕೊರೊನಾ ವಿರುದ್ಧ ಹೋರಾಟದಲ್ಲಿ ನಿಧನರಾದರು.ಈ ದುರಂತ ಸುದ್ದಿಯಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ ಮತ್ತು ನಮ್ಮ ಪ್ರಾರ್ಥನೆಗಳಲ್ಲಿ ನೀವು ನಮ್ಮೊಂದಿಗೆ ಸೇರುತ್ತೀರಿ ಎಂದು ಭಾವಿಸುತ್ತೇವೆ ಎಂದು ಸ್ಟೇಷನ್ ವ್ಯೂ ವೈದ್ಯಕೀಯ ಕೇಂದ್ರವು ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಹಲವರು ಡಾ.ಪೂರ್ಣಿಮಾ ನಾಯರ್ ನಿಧನಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಅವರ ಅನೇಕ ರೋಗಿಗಳಲ್ಲಿ ಒಬ್ಬರು ತನ್ನ ತಾಯಿಯ ಜೀವವನ್ನು ಉಳಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರು ‘ರೆಸ್ಟ್ ಇನ್ ಪೀಸ್ ಡಾ. ನಾಯರ್.. ಖಂಡಿತವಾಗಿಯೂ ನೀವು ಅತ್ಯುತ್ತಮ ವೈದ್ಯೆ. ಯಾವ ಕಾಯಿಲೆಯೆಂದು ನಿರ್ಣಯ ಮಾಡಲಾಗದಂತಹ ಮಾರಣಾಂತಿಕ ಕಾಯಿಲೆಯಿಂದ 10 ವರ್ಷಗಳ ಹಿಂದೆ ನನ್ನ ಅಮ್ಮನ ಜೀವವನ್ನು ಉಳಿಸಿದ್ದೀರಿ. ನಮ್ಮ ತಾಯಿ ತನ್ನ ಜೀವನದ ಉಳಿದ ಭಾಗವನ್ನು ನೋಡುವಂತೆ ಮಾಡಿರುವುದಕ್ಕೆ ನಮ್ಮ ಇಡೀ ಕುಟುಂಬವು ಯಾವಾಗಲೂ ನಿಮಗೆ ಕೃತಜ್ಞರಾಗಿರುತ್ತೇವೆ. ನಿಮ್ಮ ಮರಣವು ನಮಗೆ ಅತಿಯಾದ ನೋವನ್ನು ಉಂಟು ಮಾಡಿದೆ.
ನಿಮ್ಮನ್ನು ಕಳೆದುಕೊಂಡಿರುವ ನಿಮ್ಮ ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ನಮ್ಮೆಲ್ಲರ ಪ್ರೀತಿಯನ್ನು ಕಳುಹಿಸುತ್ತಿದ್ದೇವೆ ‘ ಎಂದು ಬರೆದು ಕೊಂಡಿದ್ದಾರೆ.








