VIRAT KOHLI : ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಲು ವಿರಾಟ್ ನೀಡಿದ ಕಾರಣ ಏನು..?
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾದ ಸಾರಥ್ಯದ ಜವಾಬ್ದಾರಿಯಿಂದ ಕೆಳಗಿಳಿಯುವ ಮೂಲಕ ವಿರಾಟ್ ಕೊಹ್ಲಿ ಸಂಚಲನ ನಿರ್ಧಾರ ತೆಗೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಈ ನಿರ್ಧಾರದಿಂದ ಎಲ್ಲರಿಗೂ ಶಾಕ್ ಎದುರಾಗಿದೆ. ಏಕಾಏಕಿ ವಿರಾಟ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಈ ಪ್ರಶ್ನೆಗೆ ಸ್ವತಃ ವಿರಾಟ್ ಕೊಹ್ಲಿಯೇ ಸ್ಪಷ್ಟನೆ ನೀಡಿದ್ದಾರೆ. ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳುತ್ತಾ ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ನಾಯಕತ್ವದಿಂದ ಕೆಳಗಿಳಿಯಲು ಕಾರಣವೇನೆಂಬುದನ್ನು ತಿಳಿಸಿದ್ದಾರೆ.
ತಂಡವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವಲ್ಲಿ ನಾನು ಮಾಡಬೇಕಿದ್ದನ್ನು ಮಾಡಿದ್ದೇನೆ. ನನ್ನ ಕೆರಿಯರ್ ನಲ್ಲಿ ನೂರಕ್ಕೆ 120ರಷ್ಟು ಕಷ್ಟಪಟ್ಟಿದ್ದೇನೆ.
ಒಂದು ವೇಳೆ ಆ ರೀತಿ ಮಾಡದ ಇದ್ದ ಪಕ್ಷದಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿ ಮುಂದುವರೆಯುವುದು ಸರಿಯಲ್ಲ ಎಂದು ವಿರಾಟ್ ಭಾವಿಸಿದ್ದಾರೆ.
ಆಶಿಸಿದ ಫಲಿತಾಂಶ ಬರದೇ ಇದ್ದ ಕಾರಣದಿಂದಲೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ತಂಡಕ್ಕಾಗಿ ಪ್ರಾಮಾಣಿಕನಾಗಿ ಕೆಲಸ ಮಾಡಿದ್ದೇನೆ, ತಂಡದ ಋಣಾತ್ಮಕ ಪ್ರಭಾವ ಬೀರುವ ಯಾವುದೇ ನಿರ್ಧಾರವನ್ನು ನಾನು ತೆಗೆದುಕೊಳ್ಳುವುದಿಲ್ಲ.
ನನ್ನ ನಿರ್ಧಾರದ ಮೇಲೆ ನನಗೆ ಸಂಪೂರ್ಣ ಸ್ಪಷ್ಟತೆ ಇದೆ ಎಂದು ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ ಲೇಟರ್ ನಲ್ಲಿದೆ.
ಇನ್ನು ಆ ಲೇಟರ್ ನಲ್ಲಿ ತನ್ನ ಸಹಪಾಠಿಗಳಿಗೆ ಧನ್ಯವಾದ ಹೇಳಿರುವ ವಿರಾಟ್, ಮಾಜಿ ಕೋಚ್ ರವಿಶಾಸ್ತ್ರಿ, ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಹೆಸರುಗಳನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಿದ್ದಾರೆ.
2014ರಲ್ಲಿ ಟೀಂ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ಸಿ ವಹಿಸಿಕೊಂಡ ವಿರಾಟ್ ಕೊಹ್ಲಿ, 68 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
40 ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಗೆಲುವುಗಳಲ್ಲಿ ಅದೆಷ್ಟೋ ಅವಿಸ್ಮರಣೀಯ ದಿಗ್ವಿಜಯಗಳಿವೆ.









