ಬೆಂಗಳೂರು, ಮೇ 17 : ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ನಮಗೆ ಮಕ್ಕಳ ಹಿತ ಕಾಪಾಡುವ ಜವಾಬ್ದಾರಿಯಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇಲಾಖೆಯು ಎರಡು ಪಾಳಿಗಳಲ್ಲಿ ತರಗತಿ ನಡೆಸುವ ವಿಚಾರದ ಬಗ್ಗೆ ಸಿದ್ಧತೆ ನಡೆಸುತ್ತಿದ್ದು, ಜೂನ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಪ್ರಾರಂಭವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಸ್ಪಷ್ಟನೆಯನ್ನು ನೀಡಿದ್ದು, ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವರು ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ.








