ಸಾಗರದಾಚೆ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ, ನಮ್ಮಲ್ಲಿನ ಫೋನ್ ರಿಂಗ್ ಟೋನ್ ನಲ್ಲಿ ಕೊರೊನಾ ಜಾಗೃತಿ ಸಂದೇಶ ಕೇಳಲು ಪ್ರಾರಂಭವಾಯಿತು. ಕೊರೋನಾ ಸೋಂಕು ದೇಶದಲ್ಲಿ ಹರಡಲು ಪ್ರಾರಂಭಿಸುತ್ತಿದ್ದಂತೆ ಸರಕಾರ ಜನಹಿತಕ್ಕಾಗಿ ಕೊರೊನಾ ಜಾಗೃತಿಯ ಸಂದೇಶಗಳನ್ನು ಬಿತ್ತರಿಸುವ ವ್ಯವಸ್ಥೆ ಮಾಡಿತು. ಈ ಕೊರೋನಾ ಜಾಗೃತಿಯ ಸಂದೇಶಗಳ ಹಿಂದಿರುವ ಧ್ವನಿ ಮೂಲಗಳು ನಮ್ಮ ಮಂಗಳೂರಿನ ಬಾಲೆಯರದು.
ಕನ್ನಡದಲ್ಲಿ ಮೂರು ಹಂತಗಳಲ್ಲಿ ಧ್ವನಿ ಸಂದೇಶ ಬಂದಿದ್ದು, ಮೊದಲ ಹಂತದ ಧ್ವನಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ಅವರದು. ದಿ.ವಲೇರಿಯನ್ ಫೆರ್ನಾಂಡಿಸ್ ಹಾಗೂ ಲವೀನಾ ಫೆರ್ನಾಂಡಿಸ್ ಅವರ ಪುತ್ರಿಯಾಗಿರುವ ಇವರು ಪಡೀಲ್ ನವರು. ಎಂ.ಪಿ.ಎಡ್ ಪದವೀಧರೆ. ಸ್ವಲ್ಪ ಕಾಲ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿದ್ದ ಇವರು ದೆಹಲಿಯ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕಿಯಾಗಿದ್ದಾರೆ. ಶಾಲೆಯ ಸಂಚಾಲಕರಾಗಿದ್ದ ಖ್ಯಾತ ವಾಯ್ಸ್ ಆರ್ಟಿಸ್ಟ್ ಸರವು ಕೃಷ್ಣ ಭಟ್ ಅವರು ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ರವರ ಧ್ವನಿಯನ್ನು ಗುರುತಿಸಿ ವಾಯ್ಸ್ ಓವರ್ ನಲ್ಲಿ ಅವಕಾಶ ನೀಡಿದರು. ಟಿ.ವಿ. ರೇಡಿಯೋಗಳ ಅನೇಕ ಪ್ರಕಟನೆಗಳ ಹಿಂದಿನ ಧ್ವನಿಯಾಗಿದ್ದ ಡಾರೆಲ್ ಅವರಿಗೆ ಕೊರೊನಾ ಜಾಗೃತಿ ಸಂದೇಶಕ್ಕೆ ಧ್ವನಿ ನೀಡುವ ಅವಕಾಶ ಲಭಿಸಿತು.
ಜಾಗೃತಿ ಸಂದೇಶದ ಎರಡು ಮತ್ತು ಮೂರನೆಯ ಹಂತಕ್ಕೆ ಧ್ವನಿ ನೀಡಿದವರು ವಿಟ್ಲದ ಮುಳಿಯದವರಾದ ವಿದ್ಯಾ ನಾರಾಯಣ ಭಟ್. ವಿದ್ಯಾ ನಾರಾಯಣ ಭಟ್, ಮುಳಿಯದ ಗೋಪಾಲಕೃಷ್ಣ ಭಟ್ ಮತ್ತು ವಾಣಿ ಭಟ್ ದಂಪತಿಯ ಪುತ್ರಿ. ಸಿ.ಪಿ.ಸಿ.ಆರ್.ಐ ಯಲ್ಲಿ ಸೈಂಟಿಸ್ಟ್ ಆಗಿರುವ ಡಾ| ನಾರಾಯಣ ಭಟ್ ಅವರ ಪತ್ನಿ. ಪತಿಯ ಉದ್ಯೋಗ ನಿಮಿತ್ತ ದೆಹಲಿಯಲ್ಲಿ ನೆಲೆಸಿರುವ ಇವರು ದೂರದರ್ಶನದ ಗ್ರಾಮವಿಕಾಸ ಕಾರ್ಯಕ್ರಮದ ನಿರೂಪಕರಾಗಿ, ರೇಡಿಯೋಗಳಲ್ಲಿ ಧ್ವನಿ ಕಲಾವಿದರಾಗಿ, ರೇಡಿಯೋ ನಾಟಕದಲ್ಲಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಮಾನ್ ಧನ್ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಮೊದಲಾದ ಪ್ರಕಟಣೆಗಳಿಗೆ ಧ್ವನಿ ನೀಡಿರುವ ಇವರು ಕೊರೋನಾ ಜಾಗೃತಿ ಸಂದೇಶಕ್ಕೂ ಧ್ವನಿ ನೀಡಿದ್ದಾರೆ.








