ಇಂದಿರಾ ಕ್ಯಾಂಟೀನ್ ಗೆ ಸಿದ್ದಗಂಗಾ ಶ್ರೀಗಳ ಹೆಸರು..
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದಲ್ಲಿ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್ ಸಾಕಷ್ಟು ಜನರ ಹೊಟ್ಟೆ ತುಂಬಿಸಿತ್ತು. ಈಗಲೂ ತುಂಬಿಸುತ್ತಿದೆ.
ಇದು ಸಿದ್ದರಾಮಯ್ಯ ಸರ್ಕಾರದ ಯಶಸ್ವಿ ಯೋಜನೆ ಅಂದರೂ ತಪ್ಪಾಗಲಾರದು. ಆದ್ರೆ ಇಂದಿರಾ ಕ್ಯಾಂಟಿನ್ ಹೆಸರಿಗೆ ಬಿಜೆಪಿ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ.
ಬಿಜೆಪಿ ಅಧಿಕಾರಕ್ಕೆ ಬಂದರ ನಂತರವಂತೂ ಇಂದಿರಾ ಕ್ಯಾಂಟೀನ್ ಹೆಸರನ್ನ ಅನ್ನಪೂರ್ಣೇಶ್ವರಿ ಎಂದು ಬದಲಾವಣೆ ಮಾಡಬೇಕು ಎಂಬುವುದು ಬಿಜೆಪಿ ಮುಖಂಡರು ಬೇಡಿಕೆ ಇಟ್ಟಿದ್ದರು.
ಇದಕ್ಕೆ ಪ್ರತಿಯಾಗಿ ಇಂದಿರಾ ಕ್ಯಾಂಟೀನ್ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.
ಈ ಇಂದಿರಾ ಕ್ಯಾಂಟೀನ್ ಹೆಸರಿನ ವಿವಾದ ಏನೇ ಇದ್ದರೂ, ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸುತ್ತಿದೆ.
ಅದರಲ್ಲೂ ಮುಖ್ಯವಾಗಿ ಕಳೆದ ಲಾಕ್ ಡೌನ್ ನಲ್ಲಿ ಸಾಕಷ್ಟು ಜನರ ಜೀವ ಉಳಿಸಿದೆ. 2ನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ 1.14 ಕೋಟಿ ಪೊಟ್ಟಣದಷ್ಟು ಉಚಿತ ಆಹಾರವನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಣೆ ಮಾಡಲಾಗಿದೆ.
ಹೀಗಿದ್ದರೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾತ್ರ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ.
ಇದೀಗ ಇಂದಿರಾ ಕ್ಯಾಂಟೀನ್ಗೆ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವ ಚರ್ಚೆ ಮುನ್ನಲೆಗೆ ಬಂದಿದೆ.
ಈ ಬಗ್ಗೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಇಂದಿರಾ ಕ್ಯಾಂಟೀನ್ ಗೆ ಶ್ರೀ ಶಿವಕುಮಾರಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಿದ್ರೆ ನನ್ನಷ್ಟು ಸಂತೋಷಪಡುವರು ಯಾರು ಇಲ್ಲ.
ಆದರೆ, ಕಾಂಗ್ರೆಸ್ನವರು ಇಟ್ಟಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಿದರೆ ಸಾಮಾನ್ಯವಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಸದ್ಯ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಚಿಂತನೆ ಸದ್ಯಕ್ಕಿಲ್ಲ ಎಂದಿದ್ದಾರೆ.









