ಟೇಸ್ಟಿ ಟೇಸ್ಟಿ ಸಮೋಸ ಮನೆಯಲ್ಲೇ ಮಾಡಿ..!!!
ಮೈದಾ /ಗೋಧಿ ಹಿಟ್ಟು – 2 ಕಪ್
ಆಲೂಗಡ್ಡೆ 3-4
ಈರುಳ್ಳಿ – 1
ಕೊತ್ತಂಬರಿ ಸೊಪ್ಪು ಕಾಲು ಕಪ್,
ಹಸಿ ಮೆಣಸಿನ ಕಾಯಿ – 1 ರಿಂದ 2,
ಜೀರಿಗೆ – 1/2 ಚಮಚ,
ಶುಂಠಿ – ಅರ್ಧ ಇಂಚು,
ಧನಿಯಾ ಪೌಡರ್ – 1/2 ಚಮಚ,
ಚಾಟ್ ಮಸಾಲ – 1/4 ಚಮಚ,
ಅರಿಶಿನ – 1/4 ಚಮಚ,
ಗರಂ ಮಸಾಲ – 1/2 ಚಮಚ,
ಕೆಂಪು ಮೆಣಸಿನ ಪುಡಿ – 1/2 ಚಮಚ,
ಓಂ ಕಾಳು – 1/2 ಚಮಚ,
ನಿಂಬೆ ಹಣ್ಣು – ಅರ್ಧ
ಹಸಿ ಬಟಾಣಿ (ಅಥವಾ ಬೇಯಿಸಿದ ಒಣ ಬಟಾಣಿ) – 1/2 ಕಪ್,
ತುಪ್ಪ – 2 ಚಮಚ,
ಉಪ್ಪು,
ಎಣ್ಣೆ
Saakshatv cooking recipes potato samosa
ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ /ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಎರಡು ಚಮಚ ತುಪ್ಪ, ಓಂ ಕಾಳು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಬಳಿಕ ಹಿಟ್ಟಿಗೆ ಒಂದು ಚಮಚ ಎಣ್ಣೆ ಸವರಿ 15-20 ನಿಮಿಷ ಹಾಗೆ ಬಿಡಿ.
ನಂತರ ಆಲೂಗಡ್ಡೆ ಬೇಯಿಸಿ, ಸ್ಮಾಷ್ ಮಾಡಿಟ್ಟುಕೊಳ್ಳಿ.
ಈಗ ಒಂದು ಬಾಣಲೆಗೆ ಎರಡೂ ಚಮಚ ಎಣ್ಣೆ ಸೇರಿಸಿ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಜೀರಿಗೆ, ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನ ಕಾಯಿ, ಚಿಕ್ಕದಾಗಿ ಕತ್ತರಿಸಿದ ಶುಂಠಿ, ಕತ್ತರಿಸಿದ ಈರುಳ್ಳಿ, ಬಟಾಣಿ, ಸ್ಮಾಷ್ ಮಾಡಿದ ಆಲೂಗಡ್ಡೆ ಸೇರಿಸಿ. ಒಂದು ನಿಮಿಷ ಹುರಿಯಿರಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪೌಡರ್, ಚಾಟ್ ಮಸಾಲ, ಗರಂ ಮಸಾಲ, ಮೆಣಸಿನ ಪುಡಿ, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಹುರಿಯಿರಿ.
ಬಾಣಲೆಯನ್ನು ಕೆಳಗಿಳಿಸಿ, ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಬೆರೆಸಿ.

ನಂತರ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ತ್ರಿಕೋನ ಆಕಾರದಲ್ಲಿ ಲಟ್ಟಿಸಿ. ಈಗಾಗಲೇ ಮಾಡಿಟ್ಟುಕೊಂಡ ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ. ನಂತರ ಬೆರಳುಗಳ ಸಹಾಯದಿಂದ ಮುಚ್ಚಿ.
ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ನಂತರ ಸಮೋಸವನ್ನು ಎಣ್ಣೆಯಲ್ಲಿ ಬಿಡಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಹೊಂಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ. ರುಚಿಯಾದ ಬಿಸಿ ಬಿಸಿ ಸಮೋಸ ಸವಿಯಲು ರೆಡಿ.








