ಪಶ್ಚಿಮ ಬಂಗಾಳದಲ್ಲಿ TMC, BJP ನಡುವೆ ಗಲಾಟೆ – ಗಾಳಿಯಲ್ಲಿ ಗುಂಡು
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವಿಚಾರವಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಜಗಳದಿಂದಾಗಿ ಸ್ವಾತಂತ್ರ್ಯ ಹೋರಾಟಗಾರರ 125 ನೇ ಜನ್ಮದಿನದ ಆಚರಣೆಗೆ ಅಡ್ಡಿಯುಂಟಾಗಿದೆ.
ನೈಹಾಟಿ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕ ಪಾರ್ಥ ಭೌಮಿಕ್, ಬಿಜೆಪಿಯ ಸ್ಥಳೀಯ ಬರಾಕ್‌ಪುರ ಲೋಕಸಭಾ ಸಂಸದ ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಏಳು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಡಳಿತ ಪಕ್ಷದ ಕಾರ್ಯಕರ್ತರು ಗುಂಡು ಹಾರಿಸಿ, ಬಾಂಬ್ ಎಸೆದು ಅವರ ಕಾರನ್ನು ದೋಚಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ನೇತಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವಿಚಾರವಾಗಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದ ನಂತರ ಈ ಗಲಾಟೆ ನಡೆದಿದೆ. ಈ ಕಾರ್ಯಕ್ರಮವನ್ನು ಟಿಎಂಸಿ ಆಡಳಿತವಿರುವ ಭಟ್ಪಾರ ಪುರಸಭೆ ಆಯೋಜಿಸಿತ್ತು. ಪ್ರತಿಮೆಗೆ ಮಾಲಾರ್ಪಣೆ ಮಾಡುವುದನ್ನು ತಡೆದರು ಮತ್ತು ನಂತರ ಹಲ್ಲೆ ನಡೆಸಿದರು ಎಂದು ಬಿಜೆಪಿ ಸಂಸದ ಸಿಂಗ್ ಆರೋಪಿಸಿದ್ದಾರೆ.








