ಮಂಗಳೂರು, ಮೇ 18 : ಹೊಸ ದಿಲ್ಲಿ ಪ್ರವಾಸದ ಹಿನ್ನೆಲೆಯಿರುವ ಜೆಪ್ಪಿನಮೊಗರು ನಿವಾಸಿಯೊಬ್ಬರಲ್ಲಿ ಭಾನುವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಟ್ರಾವೆಲ್ ಹಿಸ್ಟರಿ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಜೆಪ್ಪು ಪಟ್ಣದ ನಿವಾಸಿಯಾಗಿರುವ 31 ವರ್ಷದ ವ್ಯಕ್ತಿ ಎಲ್ಲಾ ಚೆಕ್ ಪೋಸ್ಟ್ ಗಳಿಂದ ತಪ್ಪಿಸಿಕೊಂಡು ಹೊಸದಿಲ್ಲಿಯಿಂದ ಬಂದಿದ್ದು, ಫೋಷಕರ ಒತ್ತಾಯದ ಮೇರೆಗೆ ಕೊರೊನಾ ತಪಾಸಣೆ ಮಾಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 10 ದಿನಗಳ ಹಿಂದೆ ದೆಹಲಿಯಿಂದ ಕಾಲ್ನಡಿಗೆ ಮೂಲಕ ಹೊರಟು, ಬಳಿಕ ಅಲ್ಲಲ್ಲಿ ಸಿಕ್ಕಿದ ವಾಹನಗಳಿಂದ ಡ್ರಾಪ್ ಪಡೆದು, ಚೆಕ್ ಪೋಸ್ಟ್ ಗಳಿಂದ ತಪ್ಪಿಸಿಕೊಂಡು ಆತ ಮನೆಗೆ ಬಂದಿದ್ದ. ತಂದೆ ತಾಯಿ ಮೊದಲು ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿ ಬಳಿಕ ಮನೆಗೆ ಬಾ ಎಂದಾಗ ಕೊರೊನಾ ತಪಾಸಣೆಗೆ ಒಳಗಾಗದೆ ಪಕ್ಷದಲ್ಲಿದ್ದ ಅಜ್ಜಿಯ ಮನೆಯಲ್ಲಿ ಉಳಿದು ಕೊಂಡಿದ್ದ. ಈ ನಡುವೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮನೆಯವರ ಒತ್ತಾಯದ ಮೇರೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ.
ಮೇ 17 ರಂದು ಆತನ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಬಂದಿದ್ದು, ಆತನಿಗೆ ಸೋಂಕು ಇರುವುದು ದೃಢಪಟ್ಟಿದೆ. ಲಾಕ್ ಡೌನ್ ಮುನ್ನವೇ ದುಬೈನಿಂದ ಬಂದಿದ್ದ ಈತ ದೆಹಲಿಯ ತನ್ನ ಫ್ಲ್ಯಾಟ್ ನಲ್ಲಿ ಉಳಿದುಕೊಂಡಿದ್ದ. ಈ ಮಧ್ಯೆ ಊರಿಗೆ ಹೋಗಲು ನಿರ್ಧರಿಸಿದ ಈತ ದೆಹಲಿಯಿಂದ ಕಾಲ್ನಡಿಗೆಯಲ್ಲಿ ಹೊರಟು, ದಾರಿಯಲ್ಲಿ ಸಿಕ್ಕಿದ ಕಾರು, ವ್ಯಾನ್, ಲಾರಿಗಳನ್ನು ಹತ್ತಿ, ಗಡಿ ತಪಾಸಣಾ ಅಧಿಕಾರಿಗಳಿಂದ ತಪ್ಪಿಸಿಕೊಂಡು 10 ದಿನಗಳ ಹಿಂದೆ ಮಂಗಳೂರಿಗೆ ಬಂದು ತಲುಪಿದ್ದ. ಮನೆಯಲ್ಲಿ ಕೊರೊನಾ ತಪಾಸಣೆ ಮಾಡಲು ಹೇಳಿದಾಗ ಅದಕ್ಕೆ ಕಿವಿಗೊಡದೆ ಸಂಬಂಧಿಕರನ್ನು ಭೇಟಿಯಾಗಿದ್ದು ಮಾತ್ರವಲ್ಲ ಊರೆಲ್ಲಾ ಸುತ್ತಾಡಿದ್ದ. ಈತನಿಗೆ ವಿವಾಹ ನಿಶ್ಚಯವಾಗಿದ್ದ ಕಾರಣ ದೆಹಲಿಯಿಂದ ಮಂಗಳೂರಿಗೆ ಬಂದಿದ್ದ ಎಂದು ಹೇಳಲಾಗುತ್ತಿದ್ದು, ಈತನ ಟ್ರಾವೆಲ್ ಹಿಸ್ಟರಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಮಾತ್ರವಲ್ಲ ಜಿಲ್ಲೆಯಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ.








