ಮಧುರೈ, ಮೇ 18 : ಹೆಣ್ಣು ಮಗು ಎಂದು ನಾಲ್ಕು ದಿನದ ಹಸುಗೂಸನ್ನು ಮಗುವಿನ ತಂದೆ ಹಾಗೂ ಅಜ್ಜಿ ಸೇರಿಕೊಂಡು ಸಾಯಿಸಿರುವ ಭಯಾನಕ ಕೃತ್ಯವೊಂದು ತಮಿಳುನಾಡಿನ ಮಧುರೈ ನಲ್ಲಿ ನಡೆದಿದೆ.ಮಗುವನ್ನು ಹತ್ಯೆ ಮಾಡಿದ ಆರೋಪಿಗಳನ್ನು ತವಾಮಣಿ (33) ಹಾಗೂ ಆತನ ತಾಯಿ ಪಾಂಡಿಯಮ್ಮಲ್ (57) ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಚಿತ್ರಾ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಈ ಕೃತ್ಯ ನಡೆಸಲಾಗಿದ್ದು, ಸ್ಥಳೀಯರು ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ಕುಟುಂಬದಲ್ಲಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಾದ ಕಾರಣ ಆರೋಪಿಗಳಾದ ತವಾಮಣಿ ಹಾಗೂ ಆತನ ತಾಯಿ ಪಾಂಡಿಯಮ್ಮಲ್ ಮಗುವಿನ ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ನಾಲ್ಕು ದಿನದ ಹಸುಗೂಸಿಗೆ ವಿಷಪ್ರಾಶನ ಮಾಡಿ ಸಾಯಿಸಿದ್ದು, ಬಳಿಕ ವೈಗೈ ನದಿಯ ಸಮೀಪ ಸಮಾಧಿ ಮಾಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ತನಿಖೆ ನಡೆಸಿದ ಪೊಲೀಸರು ಶನಿವಾರ ಸಮಾಧಿಯಿಂದ ಮಗುವಿನ ಮೃತದೇಹವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯಲ್ಲಿ ಮಗುವಿನ ಸಾವು ವಿಷ ಪ್ರಾಶನದಿಂದ ಉಂಟಾಗಿರುವುದು ದೃಢಪಟ್ಟಿದೆ. ಭಾನುವಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ತಾವು ಮಗುವಿಗೆ ವಿಷಪ್ರಾಶನ ಮಾಡಿ, ಉಸಿರುಗಟ್ಟಿಸಿ ಸಾಯಿಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಮೊದಲು ಆರೋಪಿಗಳು ಮಗು ನಿದ್ದೆಯಲ್ಲಿ ಸಾವನ್ನಪ್ಪಿತ್ತು, ನಾವು ಕೂಡಲೇ ಅಂಬುಲೆನ್ಸ್ ಗೆ ಕರೆ ಮಾಡಿದೆವು ಎಂದು ಸುಳ್ಳು ಹೇಳಿ ಬಚಾವಾಗಲು ನೋಡಿದ್ದರು. ನಂತರ ಮಗುವಿನ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿಷಪ್ರಾಶನದಿಂದ ಮಗು ಸಾವನ್ನಪ್ಪಿದೆ ಎಂದು ಬಂದ ಕಾರಣ ಇಬ್ಬರನ್ನು ಪೊಲೀಸರು ಪುನಃ ತೀವ್ರ ವಿಚಾರಣೆಗೆ ಒಳಪಡಿಸಿದರು. ಆಗ ಇಬ್ಬರೂ ನಾವೇ ಹತ್ಯೆ ಮಾಡಿರುವುದೆಂದು ಒಪ್ಪಿಕೊಂಡಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ವನಿತಾ ತಿಳಿಸಿದ್ದಾರೆ. ಮೊದಲು ಮಗುವಿಗೆ ವಿಷ ಪೂರಿತ ಗಿಡಮೂಲಿಕೆಯ ರಸವನ್ನು ಕುಡಿಸಿ ಸಾಯಿಸಲು ನೋಡಿದೆವು. ಆದರೆ ವಿಷ ಕುಡಿದರೂ ಮಗು ಬದುಕಿದ್ದನು ಗಮನಿಸಿ ಉಸಿರುಗಟ್ಟಿಸಿ ಸಾಯಿಸಿದ್ದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮಗುವಿನ ತಾಯಿ ಈ ಕೃತ್ಯದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಿರುವ ಪೊಲೀಸರು ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.








