ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ನಲ್ಲಿ..
ಬಹು ಪ್ರಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ 20 ಲಕ್ಷ ಕೋಟಿ ರೂ. ಕೊರೊನಾ ಪ್ಯಾಕೇಜ್ ಕನ್ನಡಿಯೊಳಗಿನ ಗಂಟು ಅಷ್ಟೆ.
ಟಿವಿ ಪರದೆಯಲ್ಲಿ, ಪತ್ರಿಕೆಯ ಪುಟದಲ್ಲಿ ಕಾಣುತ್ತಿದೆ. ಆದರೆ ಜನರ ಕೈಗೆ ಸಿಗುತ್ತಿಲ್ಲ. ಕೇಂದ್ರ ಹಣಕಾಸು ಸಚಿವರು ಐದು ಕಂತುಗಳಲ್ಲಿ ಬಿಚ್ಚಿಟ್ಟ ಪ್ಯಾಕೇಜ್ ಅಂಕಿ ಅಂಶಗಳ ಕಸರತ್ತು ಹಳೆಯ ಸರಕಿಗೆ ಹೊಸ ಹೊದಿಕೆ ಎಂದು ಟೀಕಿಸಿದ್ದಾರೆ.
ಕೊರೊನಾ ಹಾವಳಿಯಿಂದ ದೇಶ ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಮಾನವೀಯತೆಯ ಬಿಕ್ಕಟ್ಟನ್ನು ಎದುರಿಸಿದೆ. ಲಕ್ಷಾಂತರ ವಲಸೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಊರು ಸೇರಲು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಜನರ ಪ್ರಸ್ತಾವವೇ ಇಲ್ಲದ ಪ್ಯಾಕೇಜ್ ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ ಅಷ್ಟೆ.
ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಲೇ ಇದ್ದಾರೆ. ಪ್ರಧಾನಿ ಮೋದಿಯವರು ಖಾಲಿಯಾಗಿರುವ ಸರ್ಕಾರದ ಖಜಾನೆ ತುಂಬಲು ಹೊರಟಿದ್ದಾರೆ. ಇದರಿಂದ ಬಡವರಿಗೆ,ಹಸಿದ ಹೊಟ್ಟೆಗಳಿಗೆ, ಕಾರ್ಮಿಕರಿಗೆ,ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಸಿಕ್ಕಿದೆಷ್ಟು ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು.. ದೇಶದಲ್ಲಿ ಗುರುತಿಸಲಾದ 13 ಕೋಟಿ ಬಡವರಿಗೆ ಮಾಸಿಕ 5000 ರೂ. ನೀಡಿದರೆ ಆಗುವ ವೆಚ್ಚ 65,000 ಕೋಟಿ ರೂಪಾಯಿ. 7000 ರೂ. ನೀಡಿದರೆ ಆಗುವ ವೆಚ್ಚ 97,500 ಕೋಟಿ ರೂಪಾಯಿ. ಇಷ್ಟು ಕೊಟ್ಟು ಪುಣ್ಯ ಕಟ್ಕೊಳ್ಳಿ ಎಂದು ನಮ್ಮ ಪಕ್ಷ ಹೇಳುತ್ತಲೇ ಇದೆ. ಇಷ್ಟನ್ನೂ ನೀಡಲು ಸಾಧ್ಯ ಇಲ್ಲದಷ್ಟು ಸರ್ಕಾರ ದಿವಾಳಿ ಆಗಿದೆಯೇ?
ನರೇಗಾ ಯೋಜನೆಯ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ ಮತ್ತು ಈ ಯೋಜನೆಯನ್ನು ನಗರಪ್ರದೇಶದ ಬಡವರಿಗೂ ವಿಸ್ತರಿಸಿ ಎಂದು ಪ್ರಾರಂಭದಿಂದಲೇ ನಮ್ಮ ಪಕ್ಷ ಹೇಳುತ್ತಲೇ ಬಂದಿದೆ. ಲಕ್ಷ ಕೋಟಿಗಳ ಪ್ಯಾಕೇಜ್ ನಲ್ಲಿ ಇದರ ಪ್ರಸ್ತಾವವೇ ಇಲ್ಲ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಮೇಲ್ನೋಟಕ್ಕೆ ಬಂಪರ್ ಕೊಡುಗೆ ಎಂದು ಅನಿಸಿದರೂ ಒಳಗಿನ ಗುಟ್ಟು ಬೇರೆ ಇದೆ.
ದೇಶದಲ್ಲಿರುವ 6.2 ಲಕ್ಷ ಕೋಟಿ ಕಿರುಉದ್ದಿಮೆಗಳಲ್ಲಿ 45 ಲಕ್ಷ ದೊಡ್ಡಗಾತ್ರದ ಕಿರುಉದ್ದಿಮೆಗಳಿಗೆ ಮಾತ್ರ ಈ ನೆರವು ಲಭ್ಯ. ಉಳಿದವರ ಗತಿ ಏನು?
ಸಣ್ಣ ಕೈಗಾರಿಕೆಗಳಿಗೆ ಸಾಲ, ಸಾಲಕ್ಕೆ ಖಾತರಿ ನೀಡಿಕೆಯ ಬಗ್ಗೆ ಪ್ಯಾಕೇಜ್ ಹೇಳಿದೆ. ಉತ್ಪಾದನೆ ಇಲ್ಲದೆ ಖಾಲಿ ಬಿದ್ದಿರುವ ಕೈಗಾರಿಕೆಗಳಿಗೆ ಸಾಲಮಾಡುವ ಶಕ್ತಿ ಎಲ್ಲಿದೆ? ಕಾರ್ಮಿಕರ ಸಂಬಳ ನೀಡಿಕೆಗೆ ನೆರವು, ಹಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮೊದಲಾದ ನೆರವಿನಿಂದ ಮಾತ್ರ ಸಣ್ಣ ಕೈಗಾರಿಕೆಗಳ ರಕ್ಷಣೆ ಸಾಧ್ಯ ಎಂದಿದ್ದಾರೆ.
ಹೀಗೆ ಕೇಂದ್ರದ ವಿಶೇಷ ಪ್ಯಾಕೇಜ್ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.








