ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ ಈಗಾಗಲೇ ಹಲವು ಮಹತ್ವದ ಸಲಹೆಗಳನ್ನು ನೀಡಿರುವುದಾಗಿ ಹೇಳಿರುವ ಅವರು, ನನಗೆ ಒಂದು ಇಲಾಖೆಯ ಜವಾಬ್ದಾರಿ ನೀಡಿ ನೋಡಿ, ಉತ್ತಮ ಆಡಳಿತ ನಡೆಸಿ ತೋರಿಸುತ್ತೇನೆ ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ.
ಮಂತ್ರಿಸ್ಥಾನದ ಇಂಗಿತ
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಆಗ ನನಗೂ ಒಂದು ಇಲಾಖೆ ಕೊಟ್ಟು ನೋಡಲಿ, ಕೆಲಸ ಅಂದರೆ ಏನು ಎಂದು ಮಾಡಿ ತೋರಿಸುತ್ತೇನೆ. ಈಗಲೇ ಎಲ್ಲರೂ ಸಿಎಂ ಸಿಎಂ ಎನ್ನುತ್ತಿದ್ದಾರೆ, ನಾನು ಕೂಡ 2028ಕ್ಕೆ ಸಿಎಂ ಅಭ್ಯರ್ಥಿ ಎಂದರೆ ಮಾಡುತ್ತಾರಾ? ಕನಿಷ್ಠ ಪಕ್ಷ ನನಗೊಂದು ಮಂತ್ರಿ ಸ್ಥಾನವಾದರೂ ನೀಡಲಿ ಎಂದು ತಮ್ಮ ಮನದ ಇಚ್ಛೆಯನ್ನು ಹೊರಹಾಕಿದರು.
ತಮ್ಮ ಕ್ಷೇತ್ರದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಅವರು, ನನ್ನ ಊರಿನ 7ನೇ ತರಗತಿಯ 359 ಮಕ್ಕಳಿಗೆ ಸರಿಯಾಗಿ ವರ್ಣಮಾಲೆ ಬರುತ್ತಿಲ್ಲ ಎಂಬುದು ನೋವಿನ ಸಂಗತಿ. ಇದಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಶಾಲೆಯ ಶಿಕ್ಷಕರಿಗೆ ನೋಟಿಸ್ ನೀಡಿದ್ದೇನೆ. ಕರ್ನಾಟಕದಲ್ಲಿ ಅತಿ ಹೆಚ್ಚು ಟೀಕೆಗೆ ಒಳಗಾದ ರಾಜಕಾರಣಿ ನಾನು, ಆದರೆ ನನಗೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಹಲವು ಯೋಜನೆಗಳಿವೆ. ಅಧಿಕಾರ ಸಿಕ್ಕಾಗ ಅವುಗಳನ್ನು ಜಾರಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಾಪ್ ಸಿಂಹ ಮತ್ತು ಯತ್ನಾಳ್ ವಿರುದ್ಧ ವಾಗ್ದಾಳಿ
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತ ಸಮುದಾಯ ಮತ್ತು ಅಂಬೇಡ್ಕರ್ ಅವರ ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ಪ್ರದೀಪ್ ಈಶ್ವರ್ ತೀವ್ರವಾಗಿ ಖಂಡಿಸಿದರು. ಅಂಬೇಡ್ಕರ್ ಬಗ್ಗೆ ಓದಿಕೊಳ್ಳಿ ಎಂದು ಹೇಳಲು ಪ್ರತಾಪ್ ಸಿಂಹ ಯಾರು? ದಲಿತರ ರಕ್ತದಲ್ಲೇ ಅಂಬೇಡ್ಕರ್ ಇದ್ದಾರೆ, ಅವರಿಗೆ ಇವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಗುಡುಗಿದರು. ಇನ್ನು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಟೀಕೆಗಳಿಗೆ ಉತ್ತರಿಸಿದ ಅವರು, ಅವರ ಭಾಷೆಗೆ ಹೋಲಿಸಿದರೆ ನಾನು ಇನ್ನು ಎಲ್ಕೆಜಿ ವಿದ್ಯಾರ್ಥಿ. ಅವರ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ, ಬೇಕಿದ್ದರೆ ನನ್ನ ಮೇಲೆ ನೂರು ಕೇಸ್ ಹಾಕಲಿ ಎಂದು ಸವಾಲು ಹಾಕಿದರು.
ಆರ್ ಅಶೋಕ್ ನಾಲಾಯಕ್ ಸುನೀಲ್ ಕುಮಾರ್ ಮುಂದಿನ ನಾಯಕ
ಬಿಜೆಪಿ ನಾಯಕರ ಕಾಲೆಳೆದ ಪ್ರದೀಪ್ ಈಶ್ವರ್, ಆರ್ ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಲು ನಾಲಾಯಕ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಸುನೀಲ್ ಕುಮಾರ್ ವಿರೋಧ ಪಕ್ಷದ ನಾಯಕರಾಗುತ್ತಾರೆ ಮತ್ತು ವಿ ಸೋಮಣ್ಣ ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಾರೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರೇ ನನಗೆ ಮಾಹಿತಿ ನೀಡಿದ್ದಾರೆ ಎಂದು ಬಾಂಬ್ ಸಿಡಿಸಿದರು. ಅಶೋಕ್ ಅವರ ಇಂಗ್ಲಿಷ್ ಭಾಷೆಯ ಬಗ್ಗೆ ನಾನು ದೊಡ್ಡ ಅಭಿಮಾನಿ ಎಂದು ವ್ಯಂಗ್ಯವಾಡಿದರು.
ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯ
ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಅವರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಬದಲು ಬಿಜೆಪಿ ಪರವಾಗಿ ನಿಂತಿದ್ದಾರೆ. ಇದೇ ರೀತಿ ಅವರು ಬಿಜೆಪಿಯನ್ನು ಇಂಪ್ರೆಸ್ ಮಾಡುತ್ತಿದ್ದರೆ ಮುಂದೊಂದು ದಿನ ಅವರು ಯಾವುದಾದರೂ ರಾಜ್ಯದ ರಾಜ್ಯಪಾಲರಾಗುವುದರಲ್ಲಿ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು. ಇನ್ನು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಬಿಜೆಪಿಯ ಶಾಸಕರಿಗೂ 30 ಕೋಟಿ ಅನುದಾನ ನೀಡಿದ್ದೇವೆ, ಸರ್ಕಾರ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.








