ನವದೆಹಲಿ : ಕೊರೊನಾ ವಿರುದ್ಧದ ಹೋರಾಟಕ್ಕಾಗಿ, ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಜನರಿಗಾಗಿ ಕೇಂದ್ರ ಸರ್ಕಾರ ಘೋಷಿಸಿದ ಆರ್ಥಿಕ ಉತ್ತೇಜನ ಪ್ಯಾಕೇಜ್ ಅಸಮರ್ಕವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಆರೋಪಿಸಿದ್ದಾರೆ. ಅಲ್ಲದೆ ದೇಶದ ಜಿಡಿಪಿಯ ಶೇಕಡಾ 10 ರಷ್ಟು ಪರಿಷ್ಕೃತ ಮತ್ತು ಸಮಗ್ರ ಪ್ಯಾಕೇಜ್ ಅನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ವಿಡಿಯೋ ಕಾನ್ಫೆರೆನ್ಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರು, ವಲಸಿಗರು, ರೈತರು, ಕಾರ್ಮಿಕರು, ಸಣ್ಣ ಅಂಗಡಿಯವರು ಮತ್ತು ಮಧ್ಯಮ ವರ್ಗದವರು ಸೇರಿದಂತೆ ವರ್ಗದವನ್ನು ಉತ್ತೇಜನ ಪ್ಯಾಕೇಜ್ ನಿಂದ ಕೈಬಿಡಲಾಗಿದೆ ಎಂದು ಚಿದಂಬರಂ ದೂರಿದ್ದಾರೆ.
ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ಗೆ ಸಂಬಂಧಿಸಿದಂತೆ “ನಾವು ನಮ್ಮ ಸಂಪೂರ್ಣ ನಿರಾಶೆಯನ್ನು ವ್ಯಕ್ತಪಡಿಸುತ್ತೇವೆ ಮತ್ತು ಪ್ಯಾಕೇಜ್ ಅನ್ನು ಮರುಪರಿಶೀಲಿಸುವಂತೆ ಮತ್ತು ಜಿಡಿಪಿಯ ಶೇಕಡಾ 10 ಕ್ಕೆ ಸಮನಾದ 10 ಲಕ್ಷ ಕೋಟಿ ರೂ.ಗಿಂತ ಕಡಿಮೆಯಿಲ್ಲದ ನಿಜವಾದ ಹೆಚ್ಚುವರಿ ಖರ್ಚಿನ ಪರಿಷ್ಕೃತ ಮತ್ತು ಸಮಗ್ರ ಆರ್ಥಿಕ ಉತ್ತೇಜನ ಪ್ಯಾಕೇಜ್ ಅನ್ನು ಘೋಷಿಸುವಂತೆ ಸರ್ಕಾರವನ್ನು ವಿನಂತಿಸುತ್ತೇವೆ” ಎಂದು ಚಿದಂಬರಂ ಹೇಳಿದ್ದಾರೆ.








