ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದ ಬಜೆಟ್ : ಡಾ.ಕೆ.ಸುಧಾಕರ್ union-budget-2022 health minister dr k sudhakar reaction
ಬೆಂಗಳೂರು : ಮಾನ್ಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಂದು ಮಂಡನೆ ಮಾಡಿರುವ ಬಜೆಟ್, ಕೋವಿಡ್ ನಂತರದ ಕಾಲದಲ್ಲಿ ದೇಶದ ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಸದೃಢವಾಗಿ ಬೆಳೆಯಲು ವೇಗ ದೊರೆತಂತಾಗಿದೆ. ಜೊತೆಗೆ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೇಂದ್ರ ಬಜೆಟ್ ಬಗ್ಗೆ ಬೆಂಗಳೂರನಲ್ಲಿ ಮಾತನಾಡಿದ ಸಚಿವರು, ಸ್ವಾತಂತ್ರ್ಯದ 100 ನೇ ವರ್ಷದತ್ತ ಸಾಗುತ್ತಿರುವ ಈ ಅಮೃತ ಕಾಲದಲ್ಲಿ, ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಬಜೆಟ್ ರೂಪಿಸಲಾಗಿದೆ. ಅದರಲ್ಲೂ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಯೋಜನೆ, ಕ್ರಮಗಳನ್ನು ತಂದು ಜನರ ಜೀವನ ಗುಣಮಟ್ಟ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಈವರೆಗೆ 166 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡುವ ಮೂಲಕ ಜನರ ಜೀವ, ಜೀವನೋಪಾಯ ಎರಡನ್ನೂ ರಕ್ಷಿಸಲಾಗಿದೆ. ಲಸಿಕಾಕಾರಣ ಕೋವಿಡ್ ನಂತರದ ಆರ್ಥಿಕ ಪುಶ್ಚೇತನಕ್ಕೆ ವೇಗ ನೀಡಿದೆ. ಇಂತಹ ಬಜೆಟ್ ನೀಡಿದ ಆರ್ಥಿಕ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ಸಚಿವರು ಹೇಳಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ, 2.37 ಲಕ್ಷ ಕೋಟಿ ರೂ. ನಲ್ಲಿ ಬೆಳೆ ಖರೀದಿ ನಡೆಯಲಿದೆ. ಸಹಕಾರಿ ಸಂಘಗಳ ತೆರಿಗೆ ದರವನ್ನು ಶೇ.15 ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಅನುಮತಿ ನೀಡಲಾಗಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಕೃಷಿಯ ಸಮಗ್ರ ಸುಧಾರಣೆ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.









