Union Budget | ರಾಜ್ಯಕ್ಕೆ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ Union Budget National Tele Mental Health Program for Karnataka 122639-2
ಬೆಂಗಳೂರು : ಕೋವಿಡ್ ಬಂದ ನಂತರ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯನ್ನು ಆರಿಸಿಕೊಂಡು ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡುವುದಾಗಿ ತಿಳಿಸಿದೆ. ಇದು ಸಕಾಲಿಕವಾಗಿದ್ದು, ಇಂದಿನ ಯುವಜನತೆಗೆ ಬಹಳ ಉಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕೋವಿಡ್ ನಿಂದ ಅನೇಕರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಆರಂಭದಿಂದಲೇ ಮಾನಸಿಕ ಒತ್ತಡಕ್ಕೊಳಗಾದವರನ್ನು ಪತ್ತೆ ಮಾಡಿ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಈವರೆಗೆ, 26.08 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈಗ ಕೇಂದ್ರ ಬಜೆಟ್ ನಲ್ಲಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡಿದ್ದು, ಇದಕ್ಕಾಗಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಸೆಂಟರ್ ಫಾರ್ ಎಕ್ಸ್ ಲೆನ್ಸ್ ಎಂಬ ಕೇಂದ್ರಗಳನ್ನು ಆರಂಭಿಸಲಾಗುತ್ತದೆ.
ಈ ಕಾರ್ಯಕ್ರಮವು 23 ಕೇಂದ್ರಗಳನ್ನು ಒಳಗೊಂಡಿರುತ್ತದೆ. ಇದನ್ನು ನಮ್ಮದೇ ಬೆಂಗಳೂರಿನ ನಿಮ್ಹಾನ್ಸ್ ನಿರ್ವಹಣೆ ಮಾಡಲಿದೆ. ಬೆಂಗಳೂರಿನ ಐಐಐಟಿ ಸಂಸ್ಥೆ ತಾಂತ್ರಿಕ ನೆರವು ನೀಡಲಿದೆ. ಇಂತಹ ಅವಕಾಶವನ್ನು ರಾಜ್ಯಕ್ಕೆ ನೀಡಿರುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಇದರಿಂದಾಗಿ ಮಾನಸಿಕ ಆರೋಗ್ಯದ ನಿರ್ವಹಣೆಯನ್ನು ಭವಿಷ್ಯದಲ್ಲಿ ಕರ್ನಾಟಕ ಮುಂದಾಳತ್ವ ವಹಿಸಿ ಮಾದರಿಯಾಗಿ ನಿಲ್ಲಲಿದೆ ಎಂದು ಸಚಿವರು ಹೇಳಿದ್ದಾರೆ.









