1995ರ ಮೇ 19, ಇದು ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ದಿನ. ಅಂದು ರಿಲೀಸ್ ಆದ ಆ ಒಂದು ಸಿನಿಮಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಅಲೆಯನ್ನ ಸೃಷ್ಠಿ ಮಾಡುತ್ತೆ. ಆ ಸಿನಿಮಾ ನಿರ್ದೇಶಕರ ಯೋಜನಾ ಲಹರಿಯನ್ನೇ ಬದಲಿಸುತ್ತೆ. ಆ ಸಿನಿಮಾದ ಸ್ಫೂರ್ತಿಯಿಂದಲೇ ಅನೇಕ ಚಿತ್ರ ಕಥೆಗಳು ಹುಟ್ಟಿವೆ.. ಹುಟ್ಟುತ್ತಿವೆ.. ಆ ಸಿನಿಮಾ ಬೇರ‍್ಯಾವುದಲ್ಲ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಓಂ’.
“ಓಂ” ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾ. ಈಗಲೂ ಸಿನಿಮಾ ತೆರೆಕಂಡರೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಉಪ್ಪಿ ನಿರ್ದೇಶನದ ಈ ಸಿನಿಮಾ ಅಂದಿಗೂ ಇಂದಿಗೂ ಎಂದಿಗೂ ಸೂಪರ್ ಹಿಟ್. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಈ ಸಿನಿಮಾಗೆ ಹಂಸಲೇಖ ಅವರ ಅದ್ಭುತ ಸಂಗೀತ ಜೀವ ತುಂಬಿದೆ. ಈ ಸಿನಿಮಾದಲ್ಲಿ ಅಂದಿನ ರೌಡಿಗಳೂ ನಟಿಸಿದ್ದರು ಎಂಬೋದು ಇದರ ವಿಶೇಷ. ಅಂದ್ಹಾಗೆ ಕನ್ನಡದ ಮಟ್ಟಿಗೆ ಭೂಗತ ಲೋಕದ ಪುಟಗಳ ಕಥೆಗಳಿಗೆ ಫಾದರ್ ಅನಿಸಿಕೊಂಡಿರುವ ಓಂ ಚಿತ್ರಕ್ಕೆ ಇಂದು 25ರ ಸಂಭ್ರಮ. ಮೇ.19ಕ್ಕೆ ಓಂ ಚಿತ್ರ 25 ವರ್ಷಗಳನ್ನು ಪೂರೈಸುವ ಮೂಲಕ ಬೆಳ್ಳಿತೆರೆಯ ಭೂಗತ ಲೋಕದ ಈ ದೃಶ್ಯ ಕಥನ ಸಿಲ್ವರ್ ಜುಬಿಲೀ ಆಚರಿಸಿಕೊಳ್ಳುತ್ತಿದೆ.








