ಬೆಂಗಳೂರು: ಸಿಲಿಕಾನ್ ಸಿಟಿ ಮೂಲದ ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ‘ದಿವ್ಯಶ್ರೀ ಡೆವಲಪರ್ಸ್’, ತನ್ನ ವಸತಿ ಯೋಜನೆಗಳನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ‘ಎಚ್ಡಿಎಫ್ಸಿ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್’ (ಎಚ್ಡಿಎಫ್ಸಿ ಸಮೂಹದ ರಿಯಲ್ ಎಸ್ಟೇಟ್ ಖಾಸಗಿ ಇಕ್ವಿಟಿ ವಿಭಾಗ) ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ಈ ಕಾರ್ಯತಂತ್ರದ ಸಹಭಾಗಿತ್ವದಡಿ ಭಾರತದಲ್ಲಿ 1,500 ಕೋಟಿ ರೂ. ಮೊತ್ತದ ‘ವಸತಿ ಅಭಿವೃದ್ಧಿ ವೇದಿಕೆ’ಯನ್ನು ಸ್ಥಾಪಿಸಲಾಗುತ್ತಿದೆ. ದಿವ್ಯಶ್ರೀ ಡೆವಲಪರ್ಸ್ನ ಮಾರುಕಟ್ಟೆ ಜ್ಞಾನ ಮತ್ತು ಎಚ್ಡಿಎಫ್ಸಿ ಕ್ಯಾಪಿಟಲ್ನ ಹೂಡಿಕೆ ಪರಿಣತಿಯನ್ನು ಒಳಗೊಂಡಿರುವ ಈ ವೇದಿಕೆಯು, ಮುಂದಿನ 3-4 ವರ್ಷಗಳಲ್ಲಿ ಹೊಸ ವಸತಿ ಯೋಜನೆಗಳ ಖರೀದಿ ಮತ್ತು ಅಭಿವೃದ್ಧಿಗೆ ಬಂಡವಾಳ ಒದಗಿಸಲಿದೆ. ಇದರಿಂದ ಅಂದಾಜು 6,750 ಕೋಟಿ ರೂ. ಒಟ್ಟು ಅಭಿವೃದ್ಧಿ ಮೌಲ್ಯದ (ಜಿಡಿವಿ) ಯೋಜನೆಗಳು ರೂಪುಗೊಳ್ಳಲಿವೆ.
ಈಗಾಗಲೇ ಎರಡು ಪ್ರತ್ಯೇಕ ವಸತಿ ಯೋಜನೆಗಳ ಕುರಿತ ಪ್ರಾಥಮಿಕ ಕರಡು ಒಪ್ಪಂದಗಳು ಸಿದ್ಧವಾಗಿದ್ದು, ಮುಂದಿನ 2-3 ತಿಂಗಳುಗಳಲ್ಲಿ ಇದು ಅಂತಿಮಗೊಂಡು ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ದಿವ್ಯಶ್ರೀ ಡೆವಲಪರ್ಸ್ ಅಧ್ಯಕ್ಷ ಹಾಗೂ ಸಿಇಒ ಭಾಸ್ಕರ್ ಎನ್. ರಾಜು, “ನಮ್ಮ ವಸತಿ ವ್ಯವಹಾರದ ಪ್ರತಿಯೊಂದು ವಿಭಾಗವೂ ಈಗ ಮುಂದಿನ ಹಂತದ ಬೆಳವಣಿಗೆಗೆ ಸಜ್ಜಾಗಿದೆ. ಮುಂಬರುವ ವರ್ಷಗಳಲ್ಲಿ ದಿವ್ಯಶ್ರೀ ಸಾಧಿಸಲಿರುವ ಬೃಹತ್ ಬೆಳವಣಿಗೆಯ ವಿಶ್ವಾಸವನ್ನು ಎಚ್ಡಿಎಫ್ಸಿ ಜೊತೆಗಿನ ಈ ಒಪ್ಪಂದ ಪ್ರತಿಬಿಂಬಿಸುತ್ತದೆ,” ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಉತ್ತಮ ಗುಣಮಟ್ಟದ ವಸತಿಗಳಿಗೆ ನಿರಂತರ ಬೇಡಿಕೆಯಿದ್ದು, “ದಿವ್ಯಶ್ರೀ ಡೆವಲಪರ್ಸ್ ಹೊಂದಿರುವ ಬಲವಾದ ಟ್ರ್ಯಾಕ್ ರೆಕಾರ್ಡ್ನೊಂದಿಗೆ ಕೈಜೋಡಿಸಿ ಗ್ರಾಹಕರಿಗೆ ದೀರ್ಘಕಾಲೀನ ಮೌಲ್ಯ ಒದಗಿಸುವುದು ನಮ್ಮ ಗುರಿ,” ಎಂದು ಎಚ್ಡಿಎಫ್ಸಿ ಕ್ಯಾಪಿಟಲ್ನ ಎಂಡಿ ಮತ್ತು ಸಿಇಒ ವಿಪುಲ್ ರುಂಗ್ಟಾ ವಿವರಿಸಿದ್ದಾರೆ.
ದಿವ್ಯಶ್ರೀ ಡೆವಲಪರ್ಸ್ನ ಮಾರುಕಟ್ಟೆ ಜ್ಞಾನ ಮತ್ತು ಎಚ್ಡಿಎಫ್ಸಿ ಕ್ಯಾಪಿಟಲ್ನ ಹೂಡಿಕೆ ಪರಿಣತಿಯೊಂದಿಗೆ ನಿರ್ಮಾಣವಾಗಲಿರುವ ಈ ವಸತಿ ಯೋಜನೆಗಳು, ಅತ್ಯುತ್ತಮ ವಿನ್ಯಾಸ ಮತ್ತು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಿವೆ.
“ಈಗಾಗಲೇ ನಮ್ಮ ವಸತಿ ವ್ಯವಹಾರ ಮಹತ್ವದ ಘಟ್ಟದಲ್ಲಿದ್ದು, ಈ ಹೊಸ ಬಂಡವಾಳವು ನಮ್ಮ ಯೋಜನೆಗಳನ್ನು ಇನ್ನಷ್ಟು ವೇಗಗೊಳಿಸಲಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಿಂದ ಪ್ರಾರಂಭಿಸಿ ವೇಗವಾಗಿ ಬೆಳೆಯುತ್ತಿರುವ ಇತರ ಪ್ರಮುಖ ನಗರಗಳಿಗೂ ನಮ್ಮ ಯೋಜನೆಗಳನ್ನು ವಿಸ್ತರಿಸಲಿದ್ದೇವೆ,” ಎಂದು ದಿವ್ಯಶ್ರೀ ವಸತಿ ವಿಭಾಗದ ಸಿಇಒ ಅವಿನಾಶ್ ಸುರೇಶ್ ಹೇಳಿದ್ದಾರೆ.
ಇದಕ್ಕೆ ಧ್ವನಿಗೂಡಿಸಿರುವ ಎಚ್ಡಿಎಫ್ಸಿ ಕ್ಯಾಪಿಟಲ್ನ ಪಾಲುದಾರ ಕುನಾಲ್ ವಾಧ್ವಾನಿ, “ಭಾರತದಲ್ಲಿ ಮಧ್ಯಮ ಆದಾಯದ ಮನೆಗಳಿಗಾಗಿ ಇರುವ ಬೃಹತ್ ಬೇಡಿಕೆಯನ್ನು ಪೂರೈಸಲು ಈ ಒಪ್ಪಂದ ನೆರವಾಗಲಿದೆ,” ಎಂದು ಅಭಿಪ್ರಾಯಪಟ್ಟದ್ದಾರೆ.
1975ರಲ್ಲಿ ಸ್ಥಾಪಿತವಾದ ‘ದಿವ್ಯಶ್ರೀ ಡೆವಲಪರ್ಸ್’ 5 ದಶಕಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಐಟಿ ಕಾರಿಡಾರ್ಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದುವರೆಗೆ 3 ಕೋಟಿ ಚದರ ಅಡಿಯಷ್ಟು ಪ್ರೀಮಿಯಂ ಯೋಜನೆಗಳನ್ನು ಪೂರ್ಣಗೊಳಿಸಿರುವ ಸಂಸ್ಥೆ, ಮುಂದಿನ ದಿನಗಳಲ್ಲಿ ಇದನ್ನು 5.6 ಕೋಟಿ ಚದರ ಅಡಿಗೆ ವಿಸ್ತರಿಸುವ ಗುರಿ ಹೊಂದಿದೆ.
ಇನ್ನು, ಎಚ್ಡಿಎಫ್ಸಿ ಬ್ಯಾಂಕ್ನ ಅಂಗಸಂಸ್ಥೆಯಾಗಿರುವ ‘ಎಚ್ಡಿಎಫ್ಸಿ ಕ್ಯಾಪಿಟಲ್’, ಕೈಗೆಟುಕುವ ಮತ್ತು ಮಧ್ಯಮ ವರ್ಗದ ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಪ್ರೈವೇಟ್ ಇಕ್ವಿಟಿ ವಿಭಾಗವಾಗಿದೆ. ಇದು ಒಟ್ಟು 50,000 ಕೋಟಿ ರೂ. ಮೌಲ್ಯದ ಬೃಹತ್ ಹೂಡಿಕೆ ವೇದಿಕೆಯನ್ನು ನಿರ್ವಹಿಸುತ್ತಿದೆ.








