ಹೊಸದಿಲ್ಲಿ, ಮೇ19 : ಕೊರೋನಾ ವೈರಸ್ ಚೀನಾದ ಪ್ರಯೋಗಾಲಯದಿಂದ ಸೃಷ್ಟಿಯಾಗಿದೆ ಎನ್ನುವುದು ಬಹುತೇಕ ದೇಶಗಳ ಅಭಿಪ್ರಾಯ ಮತ್ತು ಅಮೆರಿಕದ ಬಲವಾದ ವಾದ. ಕೊರೊನಾ ವೈರಸ್ ಕುರಿತಾಗಿ ಸಂಪೂರ್ಣವಾದ ತನಿಖೆ ನಡೆಯಬೇಕು ಎಂದು ಅಮೆರಿಕ, ಆಸ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳ ಒಕ್ಕೂಟ ಸೇರಿದಂತೆ 62 ರಾಷ್ಟ್ರಗಳ ಆಗ್ರಹ. ಇದೀಗ ಇದಕ್ಕೆ ಭಾರತ ಕೂಡ ಧ್ವನಿಗೂಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶವನ್ನು ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜನೆ ಮಾಡಲಾಗಿದೆ. ಡಬ್ಲ್ಯೂ.ಎಚ್.ಒ ದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದೆ. ಕೊರೊನಾ ವೈರಸ್ ಮೂಲದ ಬಗ್ಗೆ ಆಮೂಲಾಗ್ರವಾದ ತನಿಖೆ ನಡೆಯಬೇಕೆಂದು ಅಮೆರಿಕಾದ ಬೆಂಬಲದೊಂದಿಗೆ ಆಸ್ಟ್ರೇಲಿಯಾ ಪ್ರಸ್ತಾವನೆಯನ್ನು ಮಂಡಿಸಿದೆ.
ತನಿಖೆಗೆ ಆಗ್ರಹಿಸಿರುವ ಯುರೋಪ್ ರಾಷ್ಟ್ರಗಳ ಒಕ್ಕೂಟ ಮತ್ತು ಆಸ್ಟ್ರೇಲಿಯಾಗಳ ಕ್ರಮ ಬೆಂಬಲಿಸಿ ಭಾರತವೂ ಸೇರಿದಂತೆ ಸುಮಾರು 123 ರಾಷ್ಟ್ರಗಳು ಸಹಿ ಹಾಕಿದೆ. ಚೀನಾದ ವುಹಾನ್ ನಗರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಭಾರತ ಇಂತಹ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದು, ಕೊರೊನಾ ವೈರಸ್ ವಿಶ್ವಕ್ಕೆ ಹರಡಿರುವ ಬಗ್ಗೆ ಪಾರದರ್ಶಕ ತನಿಖೆಗೆ ಆಗ್ರಹಿಸಿದೆ. ಏಳು ಪುಟಗಳ ನಿರ್ಣಯಕ್ಕೆ ಸಹಿ ಮಾಡಿರುವ 62 ಪ್ರಮುಖ ದೇಶಗಳಲ್ಲಿ ಬಾಂಗ್ಲಾದೇಶ, ಕೆನಡಾ, ರಷ್ಯಾ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯು.ಕೆ, ಜಪಾನ್ ಸೇರಿದೆ.ಕೊರೋನಾ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಪಾರದರ್ಶಕ ವಾಗಿ ನಡೆದುಕೊಂಡಿಲ್ಲ ಎಂದು ಅಮೆರಿಕ ಆರೋಪಿಸಿದ್ದು, ಈಗಾಗಲೇ ವಿಶ್ವಸಂಸ್ಥೆಗೆ ತನ್ನ ಆರ್ಥಿಕ ಅನುದಾನವನ್ನು ನಿಲ್ಲಿಸಿದೆ.








