ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜೆಡಿಎಸ್ ನಾಯಕರ ನಡುವಿನ ಸಂಘರ್ಷ ಇದೀಗ ವಿಧಾನಸೌಧದ ಶಕ್ತಿಕೇಂದ್ರಕ್ಕೆ ತಲುಪಿದ್ದು, ಜಿಲ್ಲಾಧಿಕಾರಿಗೆ ಹೊಸ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಸನ ಡಿಸಿ ಅವರು ತಮ್ಮ ವರ್ಗಾವಣೆಯನ್ನು ತಡೆಯಲು ಹಾಗೂ ಕಲ್ಲು ಕ್ವಾರಿ ಪರವಾನಗಿ ಮತ್ತು ಭೂ ಪರಿವರ್ತನೆಗಾಗಿ ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಗಂಭೀರ ಆರೋಪದ ಬೆನ್ನಲ್ಲೇ, ಇದೀಗ ಜೆಡಿಎಸ್ ನಾಯಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಜಿಲ್ಲಾಧಿಕಾರಿ ವಿರುದ್ಧ ನೇರ ಸಮರ ಸಾರಿರುವ ದಳಪತಿಗಳ ನಿಯೋಗವು ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಲತಾಕುಮಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕೃತ ದೂರು ಸಲ್ಲಿಸಿದೆ.
ಸುರೇಶ್ ಬಾಬು, ಶರವಣ ನೇತೃತ್ವದ ನಿಯೋಗದಿಂದ ದೂರು: ಸ್ವತಂತ್ರ ತನಿಖೆಗೆ ಆಗ್ರಹ!
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂಪಾಯಿಗಳ ಅಕ್ರಮ ಹಣಕಾಸಿನ ವ್ಯವಹಾರ ಹಾಗೂ ಭ್ರಷ್ಟಾಚಾರದ ಆರೋಪಗಳ ಕುರಿತು ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಜೆಡಿಎಸ್ ನಾಯಕರು ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಹಾಗೂ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ. ಶರವಣ ಅವರ ನೇತೃತ್ವದ ನಿಯೋಗವು ಡಾ. ಶಾಲಿನಿ ರಜನೀಶ್ ಅವರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಯ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸುವಂತೆ ಬಿಗಿಪಟ್ಟು ಹಿಡಿದಿದೆ.
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರು: ಡಿಸಿ ಸ್ಟೇಟಸ್ ವಿರುದ್ಧ ಶರವಣ ಕೆಂಡಾಮಂಡಲ!
ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಜಿಲ್ಲಾಧಿಕಾರಿ ಲತಾಕುಮಾರಿ ಅವರ ವರ್ತನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಾಸನ ಜಿಲ್ಲಾಧಿಕಾರಿ, ಅವರ ಕಚೇರಿ ಸಿಬ್ಬಂದಿ ಹಾಗೂ ತಹಶೀಲ್ದಾರ್ ನಡುವೆ ನಡೆದಿದ್ದ ವಾಟ್ಸಾಪ್ ಚಾಟ್‌ಗಳ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದಾಖಲೆ ಸಮೇತ ಉಲ್ಲೇಖ ಮಾಡಿದ್ದರು. ಆದರೆ ಅದಕ್ಕೆ ಉತ್ತರಿಸಬೇಕಾದ ಜಿಲ್ಲಾಧಿಕಾರಿಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಾ, ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿದ್ದಾರೆ. ಡಿಸಿ ಅವರು ನಿಜಕ್ಕೂ ಪ್ರಾಮಾಣಿಕರಲ್ಲವೇ? ಹಾಗಿದ್ದ ಮೇಲೆ ಅವರು ಇಷ್ಟೆಲ್ಲಾ ಯಾಕೆ ಮಾತನಾಡಬೇಕಿತ್ತು? ಕುಂಬಳಕಾಯಿ ಕಳ್ಳ ಎಂದರೆ ಇವರು ಯಾಕೆ ಹೆಗಲು ಮುಟ್ಟಿಕೊಳ್ಳಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.
ನೀವೇನು ರಾಜಕಾರಣಿನಾ? ಕೆಲಸ ಬಿಟ್ಟು ರಾಜಕೀಯಕ್ಕೆ ಬಂದುಬಿಡಿ ಎಂದು ಸವಾಲು!
ಇದೇ ವೇಳೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ನೆನಪಿಸಿದ ಶರವಣ, ಈ ರಾಜ್ಯದ ಸಿಎಂ ಅವರು ಆಡಳಿತದಲ್ಲಿ 10 ರೂಪಾಯಿ ಲಂಚವೂ ನಡೆಯಬಾರದು ಎಂದು ಹೇಳಿದ್ದರು. ಆದರೆ ಈಗ ಹಾಸನ ಡಿಸಿ ಅವರ ಲಂಚಾವತಾರವೇ ಬಯಲಾಗಿದೆ. ಇಂತಹ ಗಂಭೀರ ಪ್ರಕರಣ ಬೆಳಕಿಗೆ ಬಂದಾಗ ಜಿಲ್ಲಾಧಿಕಾರಿಯವರು ಸ್ವತಃ ತನಿಖೆಗೆ ಒತ್ತಾಯಿಸಬೇಕಿತ್ತು. ಆದರೆ ಅದನ್ನು ಬಿಟ್ಟು ಈ ಅಧಿಕಾರಿ ವಾಟ್ಸಾಪ್ ಮತ್ತು ಎಕ್ಸ್ ಖಾತೆಯಲ್ಲಿ ಸ್ಟೇಟಸ್ ಹಾಕುತ್ತಾರೆ, ಸಿಂಹ ಮತ್ತು ನಾಯಿಯ ಫೋಟೋ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀವೇನು ರಾಜಕಾರಣಿನಾ? ಹಾಗಿದ್ದರೆ ಅಧಿಕಾರ ಬಿಟ್ಟು ನೇರವಾಗಿ ರಾಜಕೀಯಕ್ಕೆ ಬಂದುಬಿಡಿ, ಆಗ ಏನು ಬೇಕಿದ್ದರೂ ಮುಖಾಮುಖಿ ಮಾತನಾಡೋಣ. ಸರ್ಕಾರಿ ಕರ್ತವ್ಯದಲ್ಲಿರುವ ಒಬ್ಬ ಅಧಿಕಾರಿಗೆ ಅವರದ್ದೇ ಆದ ಇತಿಮಿತಿ ಹಾಗೂ ವ್ಯಾಪ್ತಿ ಇರುತ್ತದೆ ಎಂಬುದನ್ನು ಮರೆಯಬಾರದು ಎಂದು ಶರವಣ ಗುಡುಗಿದ್ದಾರೆ.








