ಹಾಂಕಾಂಗ್, ಮೇ19 : ವಿಶ್ವದಾದ್ಯಂತ ಬಲಿಷ್ಟ ರಾಷ್ಟ್ರಗಳು ಕೊರೊನಾ ಸೋಂಕಿನ ಅಟ್ಟಹಾಸವನ್ನು ನಿಯಂತ್ರಿಸಲಾಗದೆ ಸೋತು ಮಂಡಿಯೂರುವ ಸನ್ನಿವೇಶ ಉಂಟಾಗಿರುವಾಗ 2.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ತೈವಾನ್ ಈ ಸೋಂಕಿನ ಮೇಲೆ ಜಯ ಸಾಧಿಸಿದಂತೆ ಕಂಡು ಬರುತ್ತಿದೆ. ಇದು ನೆರೆ ರಾಷ್ಟ್ರ ಚೀನಾಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದ್ದು, ತೈವಾನ್ ನ ಸಾಧನೆ ಚೀನಾದ ಕಣ್ಣನ್ನು ಕೆಂಪಾಗಿಸಿದೆ.
ಚೀನಾದ ಪಕ್ಷದಲ್ಲಿಯೇ ಇರುವ ತೈವಾನ್ ಕೊರೊನಾ ಸೋಂಕು ಜನವರಿಯಲ್ಲಿ ಕಾಣಿಸಿಕೊಂಡ ಕೂಡಲೇ ಚೀನಾದ ವಿವಿಧ ಭಾಗಗಳಿಂದ ಜನರ ಆಗಮನಕ್ಕೆ ನಿಷೇಧ ಹೇರಿತು. ವಿಹಾರ ನೌಕೆಗಳು ತನ್ನ ಕಡಲತೀರದಲ್ಲಿ ಲಂಗರು ಹಾಕುವುದನ್ನೂ ನಿರ್ಬಂಧಿಸಿತು. ದೇಶೀಯ ಮಾಸ್ಕ್ ಗಳ ಉತ್ಪಾದನೆಯನ್ನು ಹೆಚ್ಚಿಸಿತು. ವೈದ್ಯಾಧಿಕಾರಿಗಳಿಂದ ದೈನಂದಿನ ಕೊರೊನಾ ಸೋಂಕು ಪ್ರಕರಣಗಳ ಅಂಕಿ ಅಂಶಗಳನ್ನು ಪ್ರಕಟಿಸಿ, ಪಾರದರ್ಶಕ ನಿಭಾವಣೆ ಮೂಲಕ ಸಾಂಕ್ರಾಮಿಕ ರೋಗವನ್ನು ಹತೋಟಿಯಲ್ಲಿಟ್ಟು, ಮಾದರಿ ರಾಷ್ಟ್ರವಾಗಿ ಹೊರಹೊಮ್ಮಿದೆ. ತೈವಾನ್ ಬೇರೆ ರಾಷ್ಟ್ರಗಳಂತೆ ಕಠಿಣ ಲಾಕ್ ಡೌನ್ ಕೂಡ ವಿಧಿಸಿರಲಿಲ್ಲ. ಇಲ್ಲಿಯವರೆಗಿನ ಅಂಕಿ-ಅಂಶಗಳ ಪ್ರಕಾರ ತೈವಾನ್ ನಲ್ಲಿ ಒಟ್ಟು 440 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 7 ಮಂದಿ ಬಲಿಯಾಗಿದ್ದಾರೆ. 398 ಮಂದಿ ಗುಣಮುಖರಾಗಿದ್ದಾರೆ.
ಇದೀಗ ಕೊರೊನಾ ವಿರುದ್ಧದ ಹೋರಾಟದಲ್ಲಿ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಉತ್ಸುಕವಾಗಿರುವ ತೈವಾನ್ ಜಾಗತಿಕ ಆರೋಗ್ಯ ಸಂವಾದಗಳಲ್ಲಿ ಪಾಲ್ಗೊಳ್ಳಲು ತನಗೆ ಅವಕಾಶ ನೀಡಬೇಕೆಂದು ಕೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರ ವಾರ್ಷಿಕ ಸಮಾವೇಶವಾಗಿರುವ ವರ್ಲ್ಡ್ ಹೆಲ್ತ್ ಅಸೆಂಬ್ಲಿಯಲ್ಲಿ ತೈವಾನ್ ಪಾಲ್ಗೊಳ್ಳುವುದನ್ನು ಅಮೆರಿಕ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ಬೆಂಬಲಿಸುತ್ತಿವೆ. ಅಷ್ಟೇ ಅಲ್ಲ ತೈವಾನ್ 10 ದಶ ಲಕ್ಷ ಮಾಸ್ಕ್ ಗಳನ್ನು ಅಮೆರಿಕ, ಐರೋಪ್ಯ ರಾಷ್ಟ್ರಗಳು ಹಾಗೂ ಆಫ್ರಿಕ ಮತ್ತು ಕೆರಿಬಿಯನ್ ನ 15 ಸಣ್ಣ ರಾಷ್ಟ್ರಗಳಿಗೆ ದೇಣಿಗೆ ಕೂಡ ನೀಡಿತ್ತು. ಇದನ್ನು ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷ ಉರ್ಸುಲ ವನ್ಡರ್ ಲಿಯೆನ್ ಅವರು ಬಹುವಾಗಿ ಶ್ಲಾಘಿಸಿದ್ದರು.
ತೈವಾನ್ ನನ್ನು ತನ್ನ ಅವಿಭಾಜ್ಯ ಅಂಗವೆಂದು ಹೇಳುತ್ತಾ ಬಂದಿರುವ, ಅನೇಕ ವರ್ಷಗಳಿಂದ ವಿವಿಧ ಜಾಗತಿಕ ಸಂಸ್ಥೆಗಳಲ್ಲಿ ತೈವಾನ್ ಪಾಲ್ಗೊಳ್ಳುವುದನ್ನು ನಿರ್ಬಂಧಿಸುತ್ತಾ ಬಂದಿರುವ ಚೀನಾಕ್ಕೆ ತೈವಾನ್ ನ ಸಾಧನೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ತೈವಾನ್ ತನ್ನ ವಿಧ್ಯುಕ್ತ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಿಸುತ್ತಿದೆಯೆಂದು ಆಪಾದಿಸಿದೆ ಮತ್ತು ದ್ವೀಪರಾಷ್ಟ್ರದ ಸುತ್ತ ತನ್ನ ಮಿಲಿಟರಿ ಕವಾಯತನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ ತೈವಾನ್ ನನ್ನು ಮರುವಶಪಡಿಸಿಕೊಳ್ಳುವುದಕ್ಕೆ ಮಿಲಿಟರಿ ಕ್ರಮ ಜರಗಿಸುವಂತೆಯೂ ಚೀನದೊಳಗೆ ಕೂಗು ಕೇಳಿಬರುತ್ತಿದೆ. ಈಗಾಗಲೇ ಜಗತ್ತಿನಿಂದ ಕೊರೊನಾ ಸೋಂಕಿನ ಗಂಭೀರತೆಯನ್ನು ಮುಚ್ಚಿಟ್ಟು, ಪ್ರಪಂಚವನ್ನು ಕೊರೊನಾ ಸೋಂಕಿನಿಂದ ತತ್ತರಿಸುವಂತೆ ಮಾಡಿ ಅಪಾರ ಸಾವು ನೋವಿಗೆ ಕಾರಣವಾಗಿರುವ, ಜೊತೆಗೆ ಜಾಗತಿಕ ಅರ್ಥಿಕ ಬಿಕ್ಕಟ್ಟಿಗೂ ಕಾರಣವಾಗಿರುವ ಚೀನಾ ವಿಶ್ವದಾದ್ಯಂತ ಖಂಡನೆಗೆ ಗುರಿಯಾಗಿದೆ. ಆದರೂ ಪಾಠ ಕಲಿಯದ ಚೀನಾ ತನ್ನ ಕುತಂತ್ರ ಬುದ್ಧಿಯನ್ನು ಮುಂದುವರಿಸಿದೆ.








