ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಶೀಘ್ರದಲ್ಲೆ ಕ್ರಮ ಕೈಗೊಳ್ಳಲಾಗುವುದು: ಸಿಎಂ ಬೊಮ್ಮಾಯಿ Saaksha Tv
ಬೆಂಗಳೂರು: ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮಧ್ಯಂತರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.
ರಾಜ್ಯದ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ವರದಿ ಸಲ್ಲಿಸಲು ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಅಲ್ಲದೇ ಈ ಸಂಸ್ಥೆಗಳ ಸಾಮರ್ಥ್ಯ ಗುರುತಿಸಿ, ಅವುಗಳ ದಕ್ಷ ಬಳಕೆಗೆ ಮಾರ್ಗೋಪಾಯಗಳನ್ನು ಶಿಫಾರಸು ಮಾಡುವಂತೆ ತಿಳಿಸಲಾಗಿದೆ. ಹಾಗೂ ಸಾರಿಗೆ ಸಂಸ್ಥೆಗಳ ಆಸ್ತಿಗಳಿಂದ ಆದಾಯೋತ್ಪನ್ನ, ಸಂಸ್ಥೆಯ ವರ್ಕ್ ಶಾಪ್ ಗಳ ಸದ್ಬಳಕೆ, ಮಾನವ ಸಂಪನ್ಮೂಲದ ದಕ್ಷ ಬಳಕೆ, ಸಂಸ್ಥೆಗಳ ಸೇವೆಯಲ್ಲಿ ಸುಧಾರಣೆ, ತಂತ್ರಜ್ಞಾನದ ಬಳಕೆ ಮೊದಲಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ತಾವು ಕೈಗೊಂಡ ಕ್ರಮಗಳ ಕುರಿತು ಎಂ.ಆರ್. ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು ಎಂದು ಹೇಳಿದರು.
ಸಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಹಣಕಾಸು ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.